ಅರಣ್ಯವಾಸಿಗಳ ಒಕ್ಕಲ್ಲೆಬ್ಬಿಸುವ ವಿಚಾರದಲ್ಲಿ ಜನಪ್ರತಿನಿಧಿಗಳು ಮೌನವಹಿಸಿರುವುದು ನಾಚಿಕೆಗೇಡಿತನ: ಸುಧೀರ್ ಕುಮಾರ್

Update: 2019-03-12 17:26 GMT

ಬೆಳ್ತಂಗಡಿ, ಮಾ. 12: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಿಸಲು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಹೋರಾಟ ಮಾಡಿದ ಸಂಸದರು ಹಾಗೂ ಶಾಸಕರು ಅದೇ ಕೋರ್ಟ್ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕುರಿತು ನೀಡಿದ ತೀರ್ಪಿನ ವಿಚಾರದಲ್ಲಿ ಮೌನ ವಹಿಸಿರುವುದು ನಾಚಿಕೆಗೇಡಿತನ ಎಂದು ಹೈಕೋರ್ಟ್ ವಕೀಲ, ಪ್ರಗತಿಪರ ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಅವರು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆದ ಅರಣ್ಯವಾಸಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತೀರ್ಪಿನ ಪ್ರಕಾರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಜಾತಿ, ಧರ್ಮವನ್ನು ಮರೆತು ಸಂಘಟಿತ ಹೋರಾಟ ಅಗತ್ಯವಿದೆ. ಸುಪ್ರೀಂಕೋರ್ಟಿನ ತೀರ್ಪಿನ ಹಿನ್ನಲೆ ಯಲ್ಲಿ ಕೋಟ್ಯಾಂತರ ಜನರನ್ನು ಒಕ್ಕಲೆಬ್ಬಿಸುವ ಭೀತಿಯಿಂದ ಬದುಕನ್ನು ನಡೆಸುತ್ತಿದ್ದಾರೆ. ತೀರ್ಪಿಗೆ ತಡೆಯಾಜ್ಞೆ ಇದೆಯೇ ಹೊರತು ತೀರ್ಪು ರದ್ದುಗೊಂಡಿಲ್ಲ. ಕೇಂದ್ರ ಸರ್ಕಾರದ ಪರವಾಗಿ ಯಾವುದೇ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡದಿರುವುದೇ ಪರೋಕ್ಷವಾಗಿ ಇಂತಹ ತೀರ್ಪು ಬರಲು ಕಾರಣವಾಗಿದೆ. ಜನರನ್ನು ಭಾವನಾತ್ಮಕವಾಗಿ ಒಡೆಯುವ ಜನರು ತಮ್ಮ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿ, ಅರಣ್ಯವಾಸಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹಸಂಚಾಲಕ ಎಸ್. ವೈ. ಗುರುಶಾಂತ್ ಮಾತನಾಡಿ, ನಮ್ಮನ್ನಾಳುವ ಸರ್ಕಾರಗಳ ಧೋರಣೆಯ ಭಾಗವಾಗಿ ಅರಣ್ಯ ಸಂಪತ್ತಿನ ಲೂಟಿಗಾಗಿ ಮುಕ್ತ ಬಾಗಿಲು ತೆರೆದು ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರದ ಭಾಗವಾಗಿ  ಸುಪ್ರೀಂ ಕೋರ್ಟಿನ ತೀರ್ಪು ಪೂರಕವಾಗಿದೆ. ಇದರಿಂದ ಆದಿವಾಸಿಗಳಿಗೆ ಸಮಸ್ಯೆ ಎದುರಾಗಲಿದೆ. ನಾವು ಮಾಡು ಇಲ್ಲವೇ ಮಡಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದರು.

ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕುವ ಸಂವಿಧಾನ ಬದ್ದ ಹಕ್ಕನ್ನು ಕಸಿದುಕೊಂಡಿದೆ. ಇದೀಗ ಸುಪ್ರೀಂ ಕೋರ್ಟ್  ತೀರ್ಪಿನ ವಿಚಾರದಲ್ಲಿಯೂ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ, ಈ ತಪ್ಪನ್ನು ಮರೆಮಾಚಲು ಬೆಳ್ತಂಗಡಿ ಶಾಸಕರು ಆದಿವಾಸಿ ಗಳ ಸಭೆ ಕರೆದು ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಈ ಬಗ್ಗೆ ಅರಣ್ಯವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ) ಮುಖಂಡ ಶಿವಕುಮಾರ್ ಎಸ್.ಎಂ ಮಾತನಾಡಿದರು. ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಜಯಾನಂದ ಪಿಲಿಕಲ, ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ ಉಪಸ್ಥಿತರಿದ್ದರು. ಸಂಚಾಲಕ ಶೇಖರ್ ಲಾಯಿಲ ಸ್ವಾಗತಿಸಿ,ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News