×
Ad

ಉಡುಪಿ: ಪರೀಕ್ಷೆ ಭಯದಿಂದ ನಾಪತ್ತೆಯಾಗಿದ್ದ ಬಾಲಕ ಮರಳಿ ಪೋಷಕರ ಮಡಿಲಿಗೆ !

Update: 2019-03-12 23:11 IST

ಉಡುಪಿ, ಮಾ.12: ಪರೀಕ್ಷೆ ಭಯದಿಂದ ಮನೆಯಿಂದ ನಾಪತ್ತೆಯಾಗಿದ್ದ ಬಾಲಕನೋರ್ವ ಒಂದು ದಿನದ ನಂತರ ಪತ್ತೆಯಾಗಿ ಪೋಷಕರ ಮಡಿಲು ಸೇರಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ನಾಪತ್ತೆಯಾದ ಬಾಲಕನನ್ನು ಕೊಳಂಬೆಯ ಸುರೇಶ್ ಡಿ. ಕಾರಂಡೆ ಎಂಬವರ ಪುತ್ರ ಸಾಗರ್ ಎಸ್.ಕಾರಂಡೆ (15) ಎಂದು ಗುರುತಿಸಲಾಗಿದೆ. ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಈತನಿಗೆ ಈ ಹಿಂದೆ ಕಡಿಮೆ ಅಂಕ ಗಳಿಸಿದಕ್ಕೆ ತಂದೆ ಗದರಿಸಿದ್ದರೆನ್ನಲಾಗಿದೆ.

ಈ ಬಾರಿಯ ಪರೀಕ್ಷೆ ವೇಳೆ ತಂದೆಯ ಭಯದಿಂದ ಸಾಗರ್ ಮಾ.11 ರಂದು ಬೆಳಗ್ಗೆ 7ಗಂಟೆಗೆ ಉಡುಪಿ ಚಂದೂ ಮೈದಾನದ ಬಳಿ ಟ್ಯೂಶನ್‌ಗೆ ಹೋಗಿ ಅಲ್ಲಿಂದ ಎಂದಿನಂತೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದ ವನು ಮನೆಗೆ ಬಾರದೆ ನಾಪತ್ತೆಯಾಗಿದ್ದನು.

ಉಡುಪಿಯಿಂದ ಬಸ್ ಹತ್ತಿಕೊಂಡು ಸುರತ್ಕಲ್‌ಗೆ ಹೋದ ಸಾಗರ್ ಅಲ್ಲಿ ತಾಯಿಯ ನೆನಪಾಗಿ ಟೋಲ್‌ಗೇಟ್ ಬಳಿಯ ಹಣ್ಣು ಮಾರುವವರ ಮೊಬೈಲ್ ಪಡೆದು ತಾಯಿಗೆ ಕರೆ ಮಾಡಿದ್ದನು. ಆದರೆ ಮಾತನಾಡಲು ಭಯ ಪಟ್ಟ ಆತ ಮಿಸ್‌ಕಾಲ್ ಕೊಟ್ಟನು. ನಂತರ ಅಲ್ಲಿಂದ ಮತ್ತೆ ಬಸ್ ಹತ್ತಿಕೊಂಡು ಉಡುಪಿಗೆ ಕಡೆ ಬಂದಿದ್ದನು. ಈ ಮಿಸ್ ಕಾಲ್ ಆಧಾರದಲ್ಲಿ ಮನೆಯವರು ಸುರತ್ಕಲ್‌ಗೆ ತೆರಳಿ ವಿಚಾರಣೆ ನಡೆಸಿದ್ದರು.

ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ತಿರುಗಾಡುತ್ತಿದ್ದ ಈತ ರಾತ್ರಿ ಪೂರ್ತಿ ಅಲ್ಲೆ ಕಳೆದಿದ್ದನು ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ವೇಳೆ ಸಾಗರ್ ನನ್ನು ಪರಿಚಯದವರೊಬ್ಬರು ನೋಡಿ ಆತನ ತಂದೆಗೆ ಕರೆ ಮಾಡಿ ತಿಳಿಸಿದರು. ಕೂಡಲೇ ಮನೆಯವರು ಆಗಮಿಸಿ ಸಾಗರ್‌ನನ್ನು ಠಾಣೆಗೆ ಕೆರೆದುಕೊಂಡು ಹೋದರು. ಅಲ್ಲಿ ಪೊಲೀಸರು ಈ ಕುರಿತು ಹೇಳಿಕೆ ಪಡೆದುಕೊಂಡು ಬಳಿಕ ಸಾಗರ್‌ನನ್ನು ಪೋಷಕರ ವಶಕ್ಕೆ ಒಪ್ಪಿಸಿದರು.

ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News