ಈ ಬಾರಿ ಪಿಲಿಭಿತ್‌ನಿಂದ ವರುಣ್ ಗಾಂಧಿ ಸ್ಪರ್ಧೆ?

Update: 2019-03-12 17:45 GMT

ಹೊಸದಿಲ್ಲಿ,ಮಾ.12: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗಾಗಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿರುವ ಬಿಜೆಪಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಮತ್ತು ಉತ್ತರ ಪ್ರದೇಶದ ಸುಲ್ತಾನಪುರ ಸಂಸದ ವರುಣ್ ಗಾಂಧಿ ಅವರ ಲೋಕಸಭಾ ಕ್ಷೇತ್ರಗಳನ್ನು ಬದಲಿಸಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿವೆ.

ಬಿಜೆಪಿ ಈ ಬಾರಿ ವರುಣ್ ಗಾಂಧಿಯವರನ್ನು ಸುಲ್ತಾನಪುರದ ಬದಲಾಗಿ ಅವರ ತಾಯಿ ಮನೇಕಾರ ಕ್ಷೇತ್ರ ಪಿಲಿಭಿತ್‌ನಿಂದ ಕಣಕ್ಕಿಳಿಸಬಹುದು.

ಕ್ಷೇತ್ರ ಬದಲಾವಣೆಯ ವಿಚಾರವನ್ನು ಮನೇಕಾ ಗಾಂಧಿಯವರೇ ಮಂಡಿಸಿದ್ದಾರೆ. ವರುಣ್ ಗಾಂಧಿ ಸುಲ್ತಾನಪುರದಲ್ಲಿ ಜನಾದೇಶಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ. 2014ರ ಚುನಾವಣೆಯಲ್ಲಿ ವರುಣ್ ಗಾಂಧಿ ಸುಲ್ತಾನಪುರದಲ್ಲಿ ಪ್ರಬಲ ಕಾಂಗ್ರೆಸ್ ಎದುರಾಳಿ ಅಮಿತಾ ಸಿಂಗ್ ಅವರನ್ನು ಪರಾಭವಗೊಳಿಸಿದ್ದರು.

ವರುಣ್ ಗಾಂಧಿ 2009ರಲ್ಲಿ ಪಿಲಿಭಿತ್‌ನಿಂದ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಮನೇಕಾ ಗಾಂಧಿ ಉ.ಪ್ರದೇಶದಲ್ಲಿಯೇ ಇರುವ ಆಂವಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ವರುಣ್ ಗಾಂಧಿ ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ನಾಯಕತ್ವ್ವದ ವಿರುದ್ಧ ಬಹಿರಂಗವಾಗಿಯೇ ಟೀಕಿಸಿದ್ದು,ಇದರಿಂದ ಅವರಿಗೆ ಯಾವುದೇ ರಾಜಕೀಯ ಲಾಭವಾಗಿಲ್ಲ.

ಈಗ ಪುತ್ರನಿಗೆ ಸುರಕ್ಷಿತ ಲೋಕಸಭಾ ಕ್ಷೇತ್ರವನ್ನು ದೊರಕಿಸಲು ಮನೇಕಾ ಹರ್ಯಾಣಕ್ಕೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ,ಆದರೆ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು ವಿವಾದಕ್ಕೆ ಸಿಲುಕಿದೆ. ಕರ್ನಾಲ್‌ನಿಂದ ಸ್ಪರ್ಧಿಸಲು ಅವರು ಬಯಸಿದ್ದಾರೆ ಎನ್ನಲಾಗಿದೆ,ಅದರೆ ಅವರನ್ನು ಕುರುಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಹರ್ಯಾಣ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಸುಲ್ತಾನಪುರಕ್ಕೆ ತನ್ನ ಅಭ್ಯರ್ಥಿಯಾಗಿ ಪ್ರೇಮ್ ಶುಕ್ಲಾ ಅವರನ್ನು ಬಿಜೆಪಿ ಹೆಸರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News