ಈ ಬಾರಿ ಮೋದಿ ಸ್ಪರ್ಧೆ ಯಾವ ಕ್ಷೇತ್ರದಲ್ಲಿ: ಪಕ್ಷದ ಉನ್ನತ ಮೂಲಗಳು ಹೇಳುವುದು ಹೀಗೆ

Update: 2019-03-12 17:51 GMT

ಲಕ್ನೋ,ಮಾ.12: ಲೋಕಸಭಾ ಚುನಾವಣೆಗಾಗಿ ಬಿಜೆಪಿಯು ಉತ್ತರ ಪ್ರದೇಶದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಪುನರಾಯ್ಕೆಯನ್ನು ಬಯಸಿ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎನ್ನುವ ಮಾತು ಪಕ್ಷದ ವಲಯಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಾರಣಾಸಿಯಿಂದ ಮೋದಿಯವರ ಉಮೇದುವಾರಿಕೆ ಹೆಚ್ಚುಕಡಿಮೆ ನಿರ್ಧಾರವಾಗಿದೆ ಎಂದು ಬಿಜೆಪಿಯಲ್ಲಿನ ಉನ್ನತ ಮೂಲಗಳು ತಿಳಿಸಿವೆ. ಇತ್ತೀಚಿಗೆ ದಿಲ್ಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಹೀಗೊಂದು ಸರ್ವಾನುಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅನಾರೋಗ್ಯದಿಂದಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದ ಕೇಂದ್ರ ಸಚಿವೆ ಉಮಾಭಾರತಿ ಅವರನ್ನು ಮತ್ತೆ ಝಾನ್ಸಿಯಿಂದ ಸ್ಪರ್ಧಿಸುವಂತೆ ಪಕ್ಷವು ಮನವೊಲಿಸಬಹುದು. 2014ರಲ್ಲಿ ಅವರು ಈ ಕ್ಷೇತ್ರದಲ್ಲಿ ಎಸ್‌ಪಿಯ ಡಾ.ಚಂದ್ರಪಾಲ ಯಾದವ ಅವರನ್ನು ಪರಾಭವಗೊಳಿಸಿದ್ದರು.

ಆದರೆ ರಾಜ್ಯದ ಹಾಲಿ 68 ಬಿಜೆಪಿ ಸಂಸದರ ಪೈಕಿ ಸುಮಾರು 30 ಜನರ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿದವು. 2014ರಲ್ಲಿ ಬಿಜೆಪಿ ರಾಜ್ಯದಲ್ಲಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ ವೌರ್ಯ ಅವರು ತೆರವುಗೊಳಿಸಿದ್ದ ಗೋರಖ್‌ಪುರ ಮತ್ತು ಫೂಲಪುರ್ ಹಾಗೂ ಹಾಲಿ ಸಂಸದರ ನಿಧನದಿಂದ ತೆರವುಗೊಂಡಿದ್ದ ಕೈರಾನಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಯು ಮೂರು ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಇಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಜಯಭೇರಿ ಬಾರಿಸಿತ್ತು.

ಬಿಜೆಪಿಯು ಕೆಲವು ರಾಜ್ಯಸಭಾ ಸದಸ್ಯರನ್ನೂ ಲೋಕಸಭಾ ಚುನಾವಣಾ ಕಣಕ್ಕಿಳಿಸಬಹುದು. ಕೆಲವು ಶಾಸಕರು ಮತ್ತು ಆದಿತ್ಯನಾಥ ಸಂಪುಟದ ಸಚಿವರೂ ಟಿಕೆಟ್‌ಗಳನ್ನು ಪಡೆಯಬಹುದು. ಅಲ್ಲದೆ ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಳ್ಳುವ ರಾಜಕೀಯ ದಿಗ್ಗಜರು ಮತ್ತು ಜಾತಿ ನಾಯಕರೂ ಉಮೇದುವಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಭಾರೀ ಸಂಖ್ಯೆಯಲ್ಲಿದ್ದಾರೆ. 75 ವರ್ಷ ಪ್ರಾಯವನ್ನು ಮೀರಿರುವ ಹಾಲಿ ಸಂಸದರ ಕ್ಷೇತ್ರಗಳಿಗೆ ಭಾರೀ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಇಂತಹ ಸಂಸದರಲ್ಲಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ(85) ಮತ್ತು ಕಾಲರಾಜ್ ಮಿಶ್ರಾ(77) ಅವರೂ ಸೇರಿದ್ದಾರೆ. ಇವರನ್ನು ಮತ್ತೆ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿಯು ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆಯಿದೆ.

ಆದರೆ ಜೋಶಿ ಮತ್ತು ಎಲ್.ಕೆ.ಆಡ್ವಾಣಿ ಅವರ ಪ್ರಕರಣದಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News