ರಮಝಾನ್ ಸಂದರ್ಭ ಚುನಾವಣೆ: ಜಾವೇದ್ ಅಖ್ತರ್ ಹೇಳುವುದು ಹೀಗೆ

Update: 2019-03-12 17:54 GMT

ಹೊಸದಿಲ್ಲಿ,ಮಾ.12: ರಮಝಾನ್ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಕುರಿತು ಹುಟ್ಟಿಕೊಂಡಿರುವ ವಿವಾದವನ್ನು ತಳ್ಳಿಹಾಕಿರುವ ಹಿರಿಯ ಕವಿ ಜಾವೇದ್ ಅಖ್ತರ್ ಅವರು,ಈ ವಿವಾದವು ತೀರ ಜಿಗುಪ್ಸೆ ಮೂಡಿಸಿದೆ ಎಂದಿದ್ದಾರೆ.

ರಮಝಾನ್ ಮತ್ತು ಚುನಾವಣೆಗಳ ಕುರಿತು ನಡೆಯುತ್ತಿರುವ ಈ ಇಡೀ ಚರ್ಚೆಯು ಸಂಪೂರ್ಣವಾಗಿ ಜಿಗುಪ್ಸೆಯನ್ನು ಹುಟ್ಟಿಸಿದೆ. ಇದು ಜಾತ್ಯತೀತ ವಾದದ ವಿಪರ್ಯಾಸಕರ ಮತ್ತು ಜಟಿಲ ಕಥನವಾಗಿದ್ದು,ತನ್ನ ಪಾಲಿಗೆ ಹೇಸಿಗೆಯನ್ನುಂಟು ಮಾಡಿದೆ. ಇದು ಪ್ರತಿಭಟನೆಗೆ ಅರ್ಹವಾಗಿದ್ದು,ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಖ್ತರ್ ಸೋಮವಾರ ರಾತ್ರಿ ಟ್ವೀಟಿಸಿದ್ದಾರೆ.

ರಮಝಾನ್ ತಿಂಗಳಲ್ಲಿ ಚುನಾವಣೆ ಮತ್ತು ಮುಸ್ಲಿಂ ಮತದಾರರ ಮೇಲೆ ಅದರ ಪರಿಣಾಮದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಕೋಲ್ಕತಾದ ಮೇಯರ್ ಫರ್ಹಾದ್ ಹಕೀಂ ಅವರು ಕಳವಳ ವ್ಯಕ್ತಪಡಿಸಿದ್ದ ಬೆನ್ನಿಗೇ ಅಖ್ತರ್ ಟ್ವೀಟಿಸಿದ್ದಾರೆ.

ಸೋಮವಾರ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ ಅವರೂ ಹಕೀಂ ಹೇಳಿಕೆಯನ್ನು ‘ಸಂಪೂರ್ಣ ಅನುಚಿತ ಮತ್ತು ಅನಗತ್ಯ ವಿವಾದ’ ಎಂದು ಬಣ್ಣಿಸಿದ್ದರು.

ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ ಮತ್ತು ನಾವದನ್ನು ಗೌರವಿಸುತ್ತೇವೆ. ಆದರೆ ಏಳು ಹಂತಗಳ ಚುನಾವಣೆಯು ಬಿಹಾರ,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ರಮಝಾನ್ ಆಚರಿಸುವವರಿಗೆ ಕಠಿಣವಾಗಲಿದೆ ಎಂದು ಹಕೀಂ ಸೋಮವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News