×
Ad

ನಾಪತ್ತೆಯಾದ ಮೀನುಗಾರರ ಕುಟುಂಬದಿಂದ ಚುನಾವಣಾ ಬಹಿಷ್ಕಾರ

Update: 2019-03-12 23:35 IST
ಮನೆಯ ಮುಂದೆ ಮೀನುಗಾರಿಕಾ ಬಲೆಯ ಕೆಲಸ ಮಾಡುತ್ತಿರುವ ದಾಮೋದರ್ ಸಾಲ್ಯಾನ್‌ರ ತಂದೆ ಸುವರ್ಣ ತಿಂಗಳಾಯ

ಉಡುಪಿ, ಮಾ.12: ಸುವರ್ಣ ತ್ರಿಭುಜ ಬೋಟು ಸಹಿತ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ರಮದಿಂದ ಬೇಸತ್ತಿರುವ ನಾಪತ್ತೆಯಾದ ಮಲ್ಪೆಯ ಎರಡೂ ಮೀನುಗಾರ ಕುಟುಂಬದವರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ನಾಪತ್ತೆಯಾದ ಮನೆಮಂದಿಯ ಬರುವಿಕೆಯಲ್ಲಿ ಪ್ರತಿದಿನ ಕಣ್ಣೀರು ಸುರಿಸುತ್ತಿರುವ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ದಾಮೋದರ್ ಸಾಲ್ಯಾನ್ ಹಾಗೂ ಚಂದ್ರಶೇಖರ್ ಕೋಟ್ಯಾನ್ ಅವರ ಮನೆಯವರು ಈ ಬಾರಿಯ ಚುನಾವಣೆಯ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದಾರೆ.

ದಾಮೋದರ ಸಾಲ್ಯಾನ್‌ರ ಪತ್ನಿ ಮೋಹಿನಿ ಕಳೆದ ಎರಡು ತಿಂಗಳಿಂದ ಪತಿಯ ಮನೆಯಲ್ಲೇ ಇದ್ದು, ಇದೀಗ ಒಂದು ತಿಂಗಳಿನಿಂದ ಪಡುಕೆರೆಯ ತವರು ಮನೆಯಲ್ಲಿ ನೆಲೆಸಿದ್ದಾರೆ. ಸಹೋದರರು ಇತ್ತೀಚೆಗೆ ಮೀನುಗಾರಿಕೆ ವೃತ್ತಿಗೆ ತೆರಳಲು ಆರಂಭಿಸಿದ್ದಾರೆ. ತಾಯಿ ಸೀತಾ ಸಾಲ್ಯಾನ್ ಈಗಲೂ ಮಗ ನನ್ನು ನೆನೆಸಿ ಕಣ್ಣೀರಿಡುತ್ತಿದ್ದಾರೆ. ಅನಾರೋಗ್ಯ ಪೀಡಿತ ತಂದೆ ಸುವರ್ಣ ತಿಂಗಳಾಯ ಮನೆಯಲ್ಲೇ ಮೀನುಗಾರಿಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾ ಜೀವನ ಕಳೆಯುತ್ತಿದ್ದಾರೆ.

‘ಮನೆಯವರು ಇನ್ನು ಕೂಡ ಈ ಘಟನೆಯಿಂದ ಹೊರಬಂದಿಲ್ಲ. ನಮಗೆ ರಾಜಕೀಯವೇ ಬೇಡ ಎಂಬಂತಾಗಿದೆ. ಮತದಾನ ಮಾಡಲು ಯಾವುದೇ ಆಸಕ್ತಿ ಇಲ್ಲ. ನಮ್ಮ ಮನೆಯಲ್ಲಿ ಎಂಟು ಮತಗಳಿವೆ. ಆದರೆ ಎಲ್ಲರಿಗೂ ಚುನಾವಣೆ ಬೇಡ ಆಗಿದೆ’ ಎನ್ನುತ್ತಾರೆ ದಾಮೋದರ್ ಸಾಲ್ಯಾನ್‌ರ ಸಹೋದರ ಗಂಗಾಧರ ಸಾಲ್ಯಾನ್.

ಅದೇ ರೀತಿ ಚಂದ್ರಶೇಖರ್ ಕೋಟ್ಯಾನ್ ಕುಟುಂಬದವರು ಕೂಡ ಸರಕಾರ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್ ಕೋಟ್ಯಾನ್ ಅವರ ಸಹೋದರ ನಿತ್ಯಾನಂದ ಕೋಟ್ಯಾನ್ ‘ಅಣ್ಣ ಸಹಿತ ಏಳು ಮಂದಿ ನಾಪತ್ತೆಯಾಗಿ ಹಲವು ತಿಂಗಳಾದರೂ ಈವರೆಗೆ ಯಾವುದೇ ಕುರುಹು ಸಿಕ್ಕಿಲ್ಲ. ಇತ್ತೀಚೆಗೆ ಸರಕಾರ ಹಾಗೂ ಜನಪ್ರತಿನಿಧಿಗಳು ಕೂಡ ತೀರಾ ನಿರ್ಲಕ್ಷ ಮಾಡುತ್ತಿದ್ದಾರೆ. ಎಲ್ಲರೂ ಈ ಘಟನೆಯನ್ನು ಮರೆತು ಬಿಟ್ಟಿದ್ದಾರೆ. ಆದುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಹಾಕದೆ ಬಹಿಷ್ಕರಿಸಲು ನಿರ್ಧರಿಸಿದ್ದೇನೆ’ ಎಂದರು.

ನಾಪತ್ತೆಯಾಗಿ ಮೂರು ತಿಂಗಳು

ಆಳ ಸಮುದ್ರ ಮೀನುಗಾರಿಕೆಗೆ 2018ರ ಡಿ.13ರಂದು ಮಲ್ಪೆಯಿಂದ ಹೊರಟ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಬೋಟು, ಡಿ.15ರಂದು ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಇದೀಗ ಬೋಟು ನಾಪತ್ತೆಯಾಗಿ ಸರಿಸುಮಾರು ಮೂರು ತಿಂಗಳಾಗುತ್ತ ಬಂದರೂ ಈ ಕುರಿತು ಯಾವುದೇ ಕುರುಹುಗಳು ದೊರೆತಿಲ್ಲ.

ಸುವರ್ಣ ತ್ರಿಭುಜ ಬೋಟು ಡಿ.15ರಂದು ಮಹಾರಾಷ್ಟ್ರದಿಂದ ಕಾರವಾರಕ್ಕೆ ಆಗಮಿಸುತ್ತಿದ್ದ ನೌಕಪಡೆಯ ಹಡಗಿಗೆ ಢಿಕ್ಕಿಯಾಗಿ ಮುಳುಗಿರಬಹುದೆಂಬ ಶಂಕೆಯಲ್ಲಿ 25-30 ನಾಟೆಕಲ್ ಮೈಲ್ ದೂರದ ಸಮುದ್ರದ ಆಳದಲ್ಲಿ ನೌಕಪಡೆಯ ಸೋನಾರ್ ಮೂಲಕ ನಿರಂತರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.

ಈ ವೇಳೆ ಸಮುದ್ರದ ಆಳದಲ್ಲಿ ಸುಮಾರು 21-22 ಮೀಟರ್ ಉದ್ದದ ಬೋಟಿನ ಮಾದರಿಯ ವಸ್ತುವೊಂದು ಕಂಡುಬಂದಿತ್ತು. ಅದಕ್ಕಾಗಿ ಮುಳುಗು ತಜ್ಞರನ್ನು ಹಾಗೂ ಇತರ ತಂತ್ರಜ್ಞಾನ ಬಳಸಿ ಪರಿಶೀಲನೆ ಕಾರ್ಯ ನಡೆಸಲಾಗಿತ್ತು. ನಂತರ ಹೇಳಿಕೆ ನೀಡಿದ ನೌಕಾಪಡೆ, ಸಮುದ್ರದ ಆಳದಲ್ಲಿ ಕಂಡುಬಂದಿರುವುದು ಬೋಟು ಅಲ್ಲ, ಕಲ್ಲು ಬಂಡೆ ಎಂದು ತಿಳಿಸಿತ್ತು.

ಆದರೆ ಒಪ್ಪದ ಮಲ್ಪೆ ಮೀನುಗಾರ ಸಂಘ, ಈ ಬಗ್ಗೆ ನೌಕಪಡೆ ಮುಚ್ಚಿಡುತ್ತಿದೆ ಎಂದು ದೂರಿತ್ತು. ನೌಕಪಡೆ ಮೀನುಗಾರರಿಗೆ ತಪ್ಪು ಮಾಹಿತಿಯನ್ನು ನೀಡು ತ್ತಿರುವ ಬಗ್ಗೆ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಎಸ್ಪಿಯವರನ್ನು ಭೇಟಿ ಮಾಡಿ ನೌಕಪಡೆ, ಪೊಲೀಸ್, ಕೋರ್ಸ್ಟ್ ಗಾರ್ಡ್, ಮೀನುಗಾರ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚಿಸಿ ತನಿಖೆ ಮಾಡುವಂತೆ ಒತ್ತಾಯಿಸಿದ್ದರು.

ರಕ್ಷಣಾ ಸಚಿವೆಯ ವರದಿಯ ನಿರೀಕ್ಷೆಯಲ್ಲಿ

ಮೀನುಗಾರರ ನಾಪತ್ತೆ ಪ್ರಕರಣದ ಶೀಘ್ರ ತನಿಖೆ ನಡೆಸಿ ಮೀನುಗಾರರನ್ನು ರಕ್ಷಿಸುವಂತೆ ಮೀನುಗಾರರ ನಿಯೋಗ ಫೆ. 24ರಂದು ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮ್ ಅವರರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಈ ನಿಯೋಗದಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬದವರು ಕೂಡ ಇದ್ದರು.

ಇದೇ ಸಂದರ್ಭದಲ್ಲಿ ಸಚಿವರು, ಆದಷ್ಟು ಬೇಗ ನೌಕಪಡೆಯ ಅಧಿಕಾರಿಗಳ ಜೊತೆ ಮಲ್ಪೆಗೆ ಭೇಟಿ ನೀಡಿ ಸಭೆ ಕರೆದು ತನಿಖೆಗೆ ಸಂಬಂಧಿಸಿದ ವರದಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು. ಇದೇ ನಿರೀಕ್ಷೆಯಲ್ಲಿ ಮೀನುಗಾರ ಮುಖಂಡರು ಹಾಗೂ ಕುಟುಂಬದವರು ಕೂಡ ಇದ್ದರು. ಆದರೆ ಈವರೆಗೆ ಸಚಿವರು ಭೇಟಿ ನೀಡದಿರುವ ಬಗ್ಗೆ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಪತ್ತೆಯಾದ ಮೀನುಗಾರರಿಗೆ ಸಂಬಂಧಿಸಿ ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸಲು ಇದು ಸರಿಯಾದ ಸಮಯ. ಕೇವಲ ಎರಡು ಕುಟುಂಬಗಳು ಚುನಾವಣಾ ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಈ ಕುರಿತು ಕರಾವಳಿಯ ಮೂರು ಜಿಲ್ಲೆಯ ಸಮಸ್ತ ಮೀನುಗಾರರು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬರಬೇಕು. ಇದರಿಂದ ನಮ್ಮನ್ನು ಆಳುವವರಿಗೆ ಬಿಸಿ ಮುಟ್ಟಿಸಲು ಸಾಧ್ಯ.
-ಗಣಪತಿ ಮಾಂಗ್ರೆ, ಅಧ್ಯಕ್ಷರು, ಮೀನು ಮಾರಾಟ ಫೆಡರೇಶನ್, ಕಾರವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News