×
Ad

ನೀತಿ ಸಂಹಿತೆ ಹೆಸರಿನಲ್ಲಿ ಅಧಿಕಾರಿಗಳ ದರ್ಬಾರ್‌ಗೆ ಐವನ್ ಡಿಸೋಜ ಆಕ್ರೋಶ

Update: 2019-03-13 12:08 IST

ಮಂಗಳೂರು, ಮಾ.13: ಚುನಾವಣಾ ನೀತಿ ಸಂಹಿತೆಯ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಮೂಲಕ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ರಾಜ್ಯದಲ್ಲಿನ್ನೂ ಸರಕಾರ ಅಸ್ತಿತ್ವದಲ್ಲಿದೆ ಎಂಬುದನ್ನು ತಿಳಿದುಕೊಂಡು ಅಧಿಕಾರಿಗಳು ತಮ್ಮ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತ ಮತದಾನಕ್ಕೆ ಕಾಂಗ್ರೆಸ್ ಪಕ್ಷ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಆದರೆ, ನೀತಿ ಸಂಹಿತೆಯ ಹೆಸರಿನಲ್ಲಿ ಅಧಿಕಾರಿಗಳು ದರ್ಬಾರ್ ನಡೆಸಲು ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಅಲೆದಾಡಿಸುವುದು, ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ವೇದಿಕೆಗೆ ಕರೆಯಬಾರದು ಎಂದು ಒತ್ತಾಯಿಸುವುದು, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬಾರದು ಎಂದು ಸೂಚಿಸುವುದು, ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಅಡ್ಡಿಪಡಿಸುವುದು ಇತ್ಯಾದಿ ದೂರುಗಳು ಬಂದಿದೆ. ಚುನಾವಣೆ ಎಂಬುದು ಸಾರ್ವತ್ರಿಕ ಹಬ್ಬವಾಗಿದೆ. ಜನರು ತಮ್ಮ ಪಾತ್ರ ಏನು ಎಂಬುದನ್ನು ಪರಸ್ಪರ ಸಂವಹನ ನಡೆಸುವ ಮುಕ್ತ ಅವಕಾಶ ಅವರಿಗೆ ಇರಬೇಕು. ಅದು ಬಿಟ್ಟು, ಚುನಾವಣೆ ಎಂಬುದು ತುರ್ತುಪರಿಸ್ಥಿತಿ ಎಂಬಂತೆ ಅಧಿಕಾರಿಗಳು ಬಿಂಬಿಸುವುದು ಸರಿಯಲ್ಲ. ಈ ಬಗ್ಗೆ ಈಗಾಗಲೆ ಜಿಲ್ಲಾ ಚುನಾವಣಾಧಿಕಾರಿಗಳ ಗಮನ ಸೆಳೆಯಲಾಗಿದೆ. ತಕ್ಷಣ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಕಾರ್ಯಕ್ರಮಗಳು ಮೂಲಕ ರಾಜಕಾರಣಿಗಳು ಆಸೆ-ಆಮಿಷ ಒಡ್ಡಬಾರದು ಎಂಬುದನ್ನು ಒಪ್ಪುವೆವು. ಆದರೆ ನೀತಿ ಸಂಹಿತೆಯ ಹೆಸರಿನಲ್ಲಿ ಜನರ ಶೋಷಣೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಳಲಿ ದೇವಸ್ಥಾನದ ಕಾರ್ಯಕ್ರಮಕ್ಕೆ ಶುಭ ಕೋರಿ ಹಾಕಲಾದ ಬ್ಯಾನರ್, ಪೋಸ್ಟರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆಯಲಾಗಿದೆ. ಹಾಗೇ ಕಿತ್ತೊಗೆದು ಅವಮಾನಿಸುವ ಬದಲು ಅವುಗಳಿಗೆ ಸ್ಟಿಕ್ಕರ್ ಅಂಟಿಸಲಿ ಎಂದ ಐವನ್ ಡಿಸೋಜ, ಯಾವ ಕಾರಣಕ್ಕೂ ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬಾರದು. ‘ಸಿಂಗಲ್ ವಿಂಡೋ’ ತೆರೆಯುವ ಮೂಲಕ ಎಲ್ಲವೂ ಒಂದೇ ಕಡೆ ಅನುಮತಿ ಸಿಗುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಚುನಾವಣೆಯ ಘೋಷಣೆಯಾದ ಬೆನ್ನಿಗೆ ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಪಡಿತರ ಚೀಟಿಯ ಅರ್ಜಿ ಸ್ವೀಕಾರವನ್ನೂ ಸ್ಥಗಿತಗೊಳಿಸಲಾಗಿದೆ. ಜನರು ಮೂಲಭೂತ ಸೌಲಭ್ಯಗಳನ್ನು ಪಡೆಯಲು ತಡೆಯೊಡ್ಡುವುದು ಸರಿಯಲ್ಲ ಎಂದು ಐವನ್ ಡಿಸೋಜ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News