ಲೋಕಸಭಾ ಚುನಾವಣೆ: ಕ್ರಿಶ್ಚಿಯನ್‌ರನ್ನು ಕರ್ತವ್ಯಕ್ಕೆ ನಿಯೋಜಿಸದಿರಲು ಮನವಿ

Update: 2019-03-13 08:07 GMT

ಮಂಗಳೂರು, ಮಾ.13: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಪ್ರಿಲ್ 18ರಂದು ಲೋಕಸಭೆ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ದಿನ ನಿಗದಿಪಡಿಸಿದೆ. ಆದರೆ ಎಪ್ರಿಲ್ 18 ಕ್ರಿಶ್ಚಿಯನ್ ಸಮುದಾಯವರಿಗೆ ಪವಿತ್ರ ದಿನವಾಗಿರುವುದರಿಂದ ಈ ಚುನಾವಣಾ ದಿನಾಂಕ ಬದಲಾವಣೆ ಅಥವಾ ಚುನಾವಣಾ ಕಾರ್ಯಗಳಿಗೆ ಕ್ರಿಶ್ಚಿಯನ್ ಸಮುದಾಯದ ಅಧಿಕಾರಿ/ ನೌಕರರು/ಶಿಕ್ಷಕರನ್ನು ನಿಯೋಜಿಸದಿರುವಂತೆ ಕ್ರಿಶ್ಚಿಯನ್ ಸರಕಾರಿ ಅಧಿಕಾರಿ / ನೌಕರರ ಮತ್ತು ಇಂಜಿನಿಯರ್ ಗುತ್ತಿಗೆದಾರರ ಸಂಘಟನೆ ‘ಫೋಕಸ್’ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಎ.18 ಕ್ರಿಶ್ಚಿಯನ್ ಸಮುದಾಯವರಿಗೆ ಪವಿತ್ರ ದಿನವಾಗಿದ್ದು, ಅಂದು ಯೇಸುಕ್ರಿಸ್ತರು ಪರಮ ಪ್ರಸಾದವನ್ನು ಸ್ಥಾಪಿಸಿದ ದಿನವೆಂದು ಪವಿತ್ರ ಗುರುವಾರವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಅಂದು ಸಂಜೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಹಾಗೂ ಕ್ರಿಶ್ಚಿಯನ್ನರು ಭಕ್ತಿಯಿಂದ ಇರಲ್ಲಿ ಭಾಗವಹಿಸುತ್ತಾರೆ. ಎಪ್ರಿಲ್ 18ರಂದು ಚುನಾವಣೆ ನಡೆದರೆ ಅಂದಿನ ಕರ್ತವ್ಯಕ್ತೆ ನಿಯೋಜಿತರಾಗುವ ಅಧಿಕಾರಿ/ನೌಕರರು/ಶಿಕ್ಷಕರಲ್ಲಿರುವ ಕ್ರಿಶ್ಚಿಯನ್ ಸಮುದಾಯದವರಿಗೆ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಇದು ಧಾರ್ಮಿಕ ಹಕ್ಕಿನ ವಿರುದ್ಧವಾಗಿರುತ್ತದೆ. ಆದುದರಿಂದ ಸಂವಿದಾನದಲ್ಲಿ ನೀಡಲ್ಪಟ್ಟ ಧಾರ್ಮಿಕ ಹಕ್ಕನ್ನು ಕಾಪಾಡಲು ಎ.18ರ ಮತದಾನದ ದಿನಾಂಕವನ್ನು ಬದಲಾಯಿಸಿ ಎಪ್ರಿಲ್ 23ರಂದು ನಿಗದಿಪಡಿಸಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಇದು ಸಾಧ್ಯವಾಗದೇ ಇದ್ದರೆ ಎ.18ರ ಚುನಾವಣಾ ಕೆಲಸ ಕಾರ್ಯಗಳಿಗೆ ಕ್ರಿಶ್ಚಿಯನ್ ಸಮುದಾಯದ ಅಧಿಕಾರಿ/ನೌಕರರು/ಶಿಕ್ಷಕರನ್ನು ನಿಯೋಜಿಸದಿರುವಂತೆ ‘ಫೋಕಸ್’ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ ಎಂದು ಸಂಘಟನೆಯ ಸಂಚಾಲಕ ಸುಶಿಲ್ ನೊರೊನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News