ಮರಳು ಸಮಸ್ಯೆ ಬಗೆಹರಿಸದಿದ್ದರೆ ಮತದಾನ ಬಹಿಷ್ಕಾರ: ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿ ಎಚ್ಚರಿಕೆ

Update: 2019-03-13 12:08 GMT

ಉಡುಪಿ, ಮಾ.13: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾ.14ರಂದು ನಡೆಯುವ ಏಳು ಮಂದಿ ಸದಸ್ಯರ ಮರಳು ಸಮಿತಿ ಸಭೆಯಲ್ಲಿ ಮರಳು ಸಮಸ್ಯೆ ಯನ್ನು ಬಗೆಹರಿಸದಿದ್ದರೆ, ಮುಂದೆ ನ್ಯಾಯ ಸಿಗುವವರೆಗೆ ಮತದಾನವನ್ನು ಬಹಿಷ್ಕರಿಸುವುದಾಗಿ ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಸತ್ಯರಾಜ್ ಬಿರ್ತಿ, ಸುಮಾರು 10 ತಿಂಗಳು ಗಳಿಂದ ಮರಳಿನ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕುರಿತು ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯದೆ ಮರಳನ್ನೇ ನಂಬಿ ಬದುಕುತ್ತಿರುವ ನಮ್ಮನ್ನು ಕಡೆಗಣಿಸಲಾಗಿದೆಂದು ದೂರಿದರು.

ನಾಳಿನ ಸಭೆಯಲ್ಲಿ ಮರಳು ಸಮಸ್ಯೆ ಬಗೆಹರಿಸುವ ಕುರಿತು ಕ್ರಮ ತೆಗೆದು ಕೊಳ್ಳದಿದ್ದರೆ ಮುಂದೆ ನ್ಯಾಯ ಸಿಗುವವರೆಗೆ ಈ ಬಾರಿಯ ಲೋಕಸಭೆ ಚುನಾ ವಣೆ ಸೇರಿದಂತೆ ಎಲ್ಲ ಚುನಾವಣೆಯಲ್ಲೂ ಮತದಾನವನ್ನು ಬಹಿಷ್ಕರಿಸಲಾಗುವುದು. ನಾವು ಮಾತ್ರವಲ್ಲದೆ ನಮ್ಮ ಮನೆಯವರು ಯಾರು ಕೂಡ ಮತದಾನ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.

ಕಟಪಾಡಿ ಲಾರಿ, ಟೆಂಪೊ ಮಾಲಕ ಚಾಲಕರ ಸಂಘದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಮಾತನಾಡಿ, ಮರಳು ಸಮಸ್ಯೆ ಬಗೆಹರಿಸಲು ಜಿಲ್ಲಾ ಧಿಕಾರಿ ಈಗ ನೀತಿ ಸಂಹಿತೆ ನೆಪವೊಡ್ಡುತ್ತಿದ್ದಾರೆ. ನಮಗೆ ಅದು ಯಾವುದು ಮುಖ್ಯ ಅಲ್ಲ. ನಮಗೆ ಮರಳು ಒದಗಿಸಬೇಕು. ಇಲ್ಲದಿದ್ದರೆ ನಾವೆಲ್ಲರು ಸ್ವಯಂ ಪ್ರೇರಿತರಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.

ಇನ್ನು ನಮಗೆ ತಾಳ್ಮೆಯಿಂದ ಇರಲು ಸಾಧ್ಯವಿಲ್ಲ. ಇದೇ ಸಮಸ್ಯೆ ಮುಂದು ವರೆದರೆ ಇನ್ನಷ್ಟು ಜೀವಗಳು ಬಲಿಯಾಗಲಿವೆ. ಇದಕ್ಕೆ ಜಿಲ್ಲಾಡಳಿತ, ಸರಕಾರ ಹಾಗೂ ಜನಪ್ರತಿನಿಧಿಗಳೇ ಹೊಣೆಗಾರರಾಗುತ್ತಾರೆ. ಮರಳಿನ ಸಮಸ್ಯೆ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವೆ ಜಯಾಮಾಲ ಮಾತನಾಡು ತ್ತಿಲ್ಲ. ಇವರಿಗೆಲ್ಲ ನಾವು ಯಾವ ಕಾರಣಕ್ಕಾಗಿ ಮತಹಾಕಬೇಕು. ಮತದಾನ ಬಹಿಷ್ಕಾರದ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಂಡರೂ ನಾವು ಅಂಜುವುದಿಲ್ಲ. ನಮ್ಮನ್ನು ಬೇಕಾದರೆ ಜೈಲಿಗೆ ಹಾಕಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಲಾರಿ, ಟೆಂಪೊ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ, ಹೋರಾಟ ಸಮಿತಿಯ ಸಂಚಾಲಕ ಅನ್ಸಾರ್ ಅಹ್ಮದ್ ಕಟಪಾಡಿ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಉಪಸ್ಥಿತರಿದ್ದರು.

ಕಾನೂನು ಮೀರಕ್ಕೆ ಆಗಲ್ಲ: ಡಿಸಿ

ಮರಳಿನ ವಿಚಾರದಲ್ಲಿ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬರು ಮತದಾನ ಬಹಿಷ್ಕರಿಸಿದ್ದರೆಂಬ ಕಾರಣಕ್ಕೆ ಕಾನೂನು ಉಲ್ಲಂಘಿಸಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಜನ ಅರ್ಥ ಮಾಡಿಕೊಳ್ಳ ಬೇಕು. ಒಬ್ಬರ ವೈಯಕ್ತಿಕ ಅಥವಾ ಸಂಘಟನೆಯ ಅಭಿಪ್ರಾಯದಂತೆ ಕಾನೂನು ಮೀರಿ ಕೆಲಸ ಮಾಡಲು ಆಗುವುದಿಲ್ಲ. ಅದಕ್ಕೆ ಒತ್ತಾಯ ಮಾಡುವ ಅಧಿಕಾರ ಕೂಡ ಯಾರಿಗೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಕೂಡ ಚುನಾ ವಣೆಯನ್ನು ಬಹಿಷ್ಕರಿಸದೆ ಎಲ್ಲರು ಮತದಾನದಲ್ಲಿ ಭಾಗವಹಿಸಬೇಕೆಂಬುದು ನನ್ನ ಮನವಿಯಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಆಯೋಗದ ಅನುಮತಿ ಪಡೆಯಿರಿ: ಭಟ್

ಚುನಾವಣಾ ಆಯೋಗದ ಅನುಮತಿ ಪಡೆದು ಏಳು ಸದಸ್ಯರಿರುವ ಮರಳು ಸಮಿತಿಯ ಮೂಲಕ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಪ್ರಾರಂಭಿ ಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ಈ ಬಾರಿಯ ಚುನಾ ವಣೆಯನ್ನು ಕೂಡ ಬಹಿಷ್ಕಾರ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿ ದ್ದಾರೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೂಡಲೇ ಮರಳು ತೆಗೆಯಲು ಅನುಮತಿ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿ ದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News