×
Ad

ಬೀದಿ ನಾಯಿಗಳಿಗೆ ನೀರುಣಿಸಿ; ಮ್ಯಾಕ್ಟ್ ಅಭಿಯಾನ

Update: 2019-03-13 20:19 IST

ಉಡುಪಿ, ಮಾ.13: ಬೀದಿ ನಾಯಿಗಳನ್ನು ತಂದು ಆರೈಕೆ ಮಾಡಿ ಅವುಗಳನ್ನು ಅಗತ್ಯ ಉಳ್ಳವರಿಗೆ ದತ್ತು ನೀಡಿ, ವಿಶಿಷ್ಟ ರೀತಿಯಲ್ಲಿ ಅಭಿಯಾನ ನಡೆಸುತ್ತಿರುವ ಮಲ್ಪೆಯ ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್) ಇದೀಗ ಇನ್ನೊಂದು ಅಭಿಯಾನವನ್ನು ಆರಂಭಿಸಿದೆ. ಬೇಸಿಗೆ ಕಾಲದಲ್ಲಿ ಬೀದಿ ಬದಿಯ ನಾಯಿಗಳು ನೀರಿಲ್ಲದೇ ನರಳುತ್ತಿರುತ್ತವೆ. ಆದ್ದರಿಂದ ಮಾನವೀಯ ನೆಲೆಯಲ್ಲಿ ‘ಬೀದಿ ನಾಯಿಗಳಿಗೆ ನೀರುಣಿಸಿ’ ಎಂಬ ಜನಜಾಗೃತಿ ಅಭಿಯಾನ ವನ್ನು ಅದು ಆರಂಭಿಸಿದೆ.

ನಮ್ಮಂತೆ ಇತರ ಪ್ರಾಣಿಗಳಿಗೂ ಈ ಭೂಮಿ, ನೀರು, ಗಾಳಿಯನ್ನು ಅನುಭವಿ ಸುವ ಹಕ್ಕಿದೆ ಎಂದು ಪ್ರತಿಪಾದಿಸುವ ಟ್ರಸ್ಟ್ ಮುಖ್ಯಸ್ಥೆ ಬಬಿತಾ ಮಧ್ವರಾಜ್, ನಾಯಿಗಳಂತಹ ಪ್ರಾಣಿಗಳು ಮನುಷ್ಯನನ್ನೇ ಅವಲಂಭಿಸಿರುವುದರಿಂದ ಅವುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಕು ನಾಯಿಗಳಂತೆ, ಬೀದಿ ನಾಯಿಗಳಿಗೆ ಮನೆ, ರಕ್ಷಣೆ, ಲಸಿಕೆ, ಒಳ್ಳೆಯ ಆಹಾರ ಇತ್ಯಾದಿಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲದಿದ್ದರೂ, ರಸ್ತೆ ಪಕ್ಕದಲ್ಲಿ ಒಂದಷ್ಟು ನೀರನ್ನು ಇಟ್ಟು ಬೀದಿ ನಾಯಿ  ಮರಿಗಳನ್ನು ರಕ್ಷಿಸುವುದು ಸಾಧ್ಯವಿದೆ. ಆದ್ದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲರೂ ಬೀದಿ ನಾಯಿಗಳಿಗೆ ನೀರುಣಿಸುವ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದವರು ಮನವಿ ಮಾಡಿದ್ದಾರೆ.

ಹಳೆಯ ಮಣ್ಣಿನ ಅಥವಾ ಸಿರಾಮಿಕ್ ಪಾತ್ರೆಯಲ್ಲಿ ನಿತ್ಯ ಒಂದಷ್ಟು ನೀರು ತುಂಬಿಸಿ ಮನೆಯ, ಅಂಗಡಿಯ ಹೊರಗೆ ರಸ್ತೆಯ ಪಕ್ಕದ ನೆರಳಿನಲ್ಲಿಟ್ಟು ಬಿಡಿ. ಈ ಸಂದೇಶವನ್ನು ಇನ್ನೂ ಒಂದಷ್ಟು ಜನರಿಗೆ ಪ್ರಸಾರ ಮಾಡಿ, ನಾವು ಈ ಕೆಲಸದಿಂದ ಕಳೆದುಕೊಳ್ಳುವುದು ಏನೂ ಇಲ್ಲ, ಆದರೇ ಈ ಕೆಲಸದಿಂದ ನಾಯಿಗಳು ಜೀವದಾನ ಪಡೆಯುತ್ತವೆ ಎಂದವರು ತಮ್ಮ ಪತ್ರಿಕಾ ಪ್ರಕಟಣೆ ಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News