ಉಡುಪಿ - ಚಿಕ್ಕಮಗಳೂರು: ಜೆಡಿಎಸ್ ಅಭ್ಯರ್ಥಿ ಯಾರು ?

Update: 2019-03-13 16:24 GMT

ಉಡುಪಿ, ಮಾ.13: ಈ ಬಾರಿಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು ಇದೀಗ ಅಭ್ಯರ್ಥಿ ಯಾರು ಎಂಬುದು ಕ್ಷೇತ್ರದ ಮತದಾರರ ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತನಗೆ ಸಿಕ್ಕಿರುವ ಮಾಹಿತಿಯಂತೆ ಸೀಟು ಹಂಚಿಕೆ ಇನ್ನೂ ಪೂರ್ಣ ಗೊಂಡಿಲ್ಲ. ಆದರೆ ಒಂದು ವೇಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಿದರೆ, ಹೈಕಮಾಂಡ್ ಸೂಚನೆಯಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ನಿಲ್ಲುವ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಜೆಡಿಎಸ್‌ನ ಅಭ್ಯರ್ಥಿ ಯಾರು ಎಂಬ ಬಗ್ಗೆ ತನಗೇನೂ ತಿಳಿದಿಲ್ಲ ಎಂದರು.

ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು ಅವರನ್ನು ಸಂಪರ್ಕಿಸಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಯಾರಾಗಲಿದ್ದಾರೆ ಎಂದು ಪ್ರಶ್ನಿಸಿದಾಗ, ಹಿರಿಯರಾದ ಬೋಜೇಗೌಡರು, ವೈ.ಎಸ್.ವಿ.ದತ್ತಾ, ಧರ್ಮೇಗೌಡರು ಹಾಗೂ ತಾನು ಟಿಕೇಟ್ ಆಕಾಂಕ್ಷಿಗಳಾಗಿದ್ದು, ಹಿರಿಯ ನಾಯಕರು ಯಾರಿಗೆ ಟಿಕೇಟ್ ನೀಡಲು ನಿರ್ಧರಿಸುತ್ತಾರೋ ಅವರು ಸ್ಪರ್ಧಿಸುತ್ತಾರೆ ಎಂದರು.

 ಹಿಂದೆ ಜೆಡಿಎಸ್‌ನಿಂದ ಸಚಿವರಾಗಿದ್ದು, ಈಗ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಜೆಡಿಎಸ್‌ನಿಂದ ಸ್ಪರ್ಧಿಸುವ ಸುದ್ದಿ ಜೋರಾಗಿ ಕೇಳಿಬರುತ್ತಿರುವ ಕುರಿತು ಪ್ರಶ್ನಿಸಿದಾಗ, ಹೆಗ್ಡೆ ಅವರು ಒಳ್ಳೆಯ, ಬುದ್ಧಿವಂತೆ ರಾಜಕಾರಣಿಯಾಗಿದ್ದು, ಅವರೀಗಲೂ ಬಿಜೆಪಿಯಲ್ಲಿರುವುದರಿಂದ ಅವರ ಬಗ್ಗೆ ನಾನೇನೂ ಹೇಳಲಾರೆ ಎಂದರು.

ಜೆ.ಪಿ.ಹೆಗ್ಡೆ ಅವರ ನಿಕಟವರ್ತಿಗಳೂ ಈ ಬಗ್ಗೆ ಮುಗಂ ಆಗಿದ್ದಾರೆ. ಆದರೆ ಜೆ.ಪಿ.ಹೆಗ್ಡೆ ಅವರು ಈಗ ವೈರಲ್ ಆಗುತ್ತಿರುವ ಸುದ್ದಿಗೆ ಇಂದು ತನ್ನ ಟ್ವಿಟರ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ್ದು, ನಾನು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿರುವಂತೆ, ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ಬದಲಿಸುತ್ತಿಲ್ಲ. ಹಿಂದೆ ಹೇಳಿದಂತೆ ಬಿಜೆಪಿ ಪಕ್ಷ ನನಗೆ ಟಿಕೇಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇದು ಬಿಟ್ಟು ಮಾಧ್ಯಮಗಳಲ್ಲಿ ಬೇರೆ ಏನೇ ಪ್ರಕಟಗೊಂಡರೂ ಅದು ನನ್ನ ಹೇಳಿಕೆಯಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News