‘ರಾಮಕೃಷ್ಣ ಮಿಷನ್‌ನಿಂದ ಶೀಘ್ರ ‘ಮಡಿಕೆ ಗೊಬ್ಬರ’ ಯೋಜನೆ’

Update: 2019-03-13 17:08 GMT

ಮಂಗಳೂರು, ಮಾ.13: ರಾಮಕೃಷ್ಣ ಆಶ್ರಮದಿಂದ ಕಳೆದ ನಾಲ್ಕೂವರೆ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ‘ಸ್ವಚ್ಛ ಮಂಗಳೂರು’ ಶ್ರಮದಾನ ಕಾರ್ಯಕ್ರಮವನ್ನು ಸರಿಯಾಗಿ ಐದು ವರ್ಷಗಳು ಪೂರ್ಣಗೊಂಡ ಬಳಿಕ ಸಮಾಪ್ತಿಗೊಳಿಸಲಾಗುವುದು. ಪರ್ಯಾಯವಾಗಿ ‘ಮಡಿಕೆ ಗೊಬ್ಬರ’ ಯೋಜನೆ ಜಾರಿಗೆ ತರಲಿದ್ದೇವೆ ಎಂದು ರಾಮಕೃಷ್ಣ ಮಿಶನ್‌ನ ಏಕಗಮ್ಯಾನಂದ ಶ್ರೀ ಪ್ರಕಟಿಸಿದರು.

ಮಂಗಳೂರು ಧರ್ಮಪ್ರಾಂತದ ‘ಲಾವ್ದಾತೊ ಸಿ’ ಸಮಿತಿಯಿಂದ ನಗರದ ಮಿಲಾಗ್ರಿಸ್ ಸೆನೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ‘ಧರ್ಮ ಮತ್ತು ಧರಿತ್ರಿ’ ವಿಚಾರ ಸಂಕಿರಣವನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ, ವೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ರಾಮಕೃಷ್ಣ ಮಿಶನ್‌ನ ಏಕಗಮ್ಯಾನಂದ ಶ್ರೀ ಉದ್ಘಾಟಿಸಿದರು.

ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ಮಿಶನ್‌ನ ಏಕಗಮ್ಯಾನಂದ ಶ್ರೀ, ಮಂಗಳೂರು ನಗರದ ಹೊರವಲಯ ಪ್ರದೇಶ ಪಚ್ಚನಾಡಿಯಲ್ಲಿ ನಗರದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರ ಬದಲಾಗಿ ನಗರದಲ್ಲಿ ಉತ್ಪತ್ತಿಯಾಗುವ ಒಣ ಹಾಗೂ ಹಸಿ ಕಸವನ್ನು ಬಳಸಿಕೊಂಡು ರಾಮಕೃಷ್ಣ ಆಶ್ರಮದಿಂದ ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ‘ಮಡಿಕೆ ಗೊಬ್ಬರ’ಯೋಜನೆಯನ್ನು ಹಾಕಿಕೊಳ್ಳಲಾಗುವುದು ಎಂದರು.

ಪ್ರತಿಯೊಂದು ಮನೆಗಳಿಂದ ಒಣ ಹಾಗೂ ಹಸಿಕಸವನ್ನು ಪ್ರತ್ಯೇಕವಾಗಿ ಪಡೆದುಕೊಂಡು ಅದನ್ನು ಮಡಿಕೆಗಳಲ್ಲಿ ಸುರಿದು ಗೊಬ್ಬರವನ್ನಾಗಿಸಲಾಗುವುದು. ‘ಮಡಿಕೆ ಗೊಬ್ಬರ’ಯೋಜನೆ ಉತ್ಪಾದನೆಗೊಳ್ಳುವ ಗೊಬ್ಬರದಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ. ಮಡಿಕೆ ಗೊಬ್ಬರ ತಯಾರಿಸಿ ಎಂಸಿಎಫ್ (ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಲಿಮಿಟೆಡ್) ಸಂಸ್ಥೆಯಲ್ಲಿ ಪರೀಕ್ಷಿಸಲಾಗಿದೆ. ಈ ಪ್ರಯೋಗ ಯಶಸ್ವಿಯೂ ಆಗಿದೆ. ಅತಿಶೀಘ್ರದಲ್ಲಿ ‘ಮಡಿಕೆ ಗೊಬ್ಬರ’ಯೋಜನೆ ಜಾರಿಗೆ ಬರಲಿದೆ ಎಂದು ಏಕಗಮ್ಯಾನಂದ ಶ್ರೀ ವಿವರಿಸಿದರು.

ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ಹೆಚ್ಚುತ್ತಿದೆ. ಮಾನವನ ದುರಾಸೆ ಮತ್ತು ಉದಾಸೀನತೆ ಬಿಟ್ಟು ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಪರಿಸರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮುಂದೊಂದು ದಿನ ಪರಿಸರವಿಲ್ಲದಿದ್ದರೆ ಮಾನವನ ಕುಲ ನಾಶವಾಗಲಿದೆ. ಪರಿಸರ ಮತ್ತು ಪ್ರಕೃತಿಯನ್ನು ನಾಶ ಮಾಡುವವನು ಧರ್ಮಿಷ್ಟನಲ್ಲ ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಮೂಡುಬಿದಿರೆಯ ಜೈನ್ ಹೈಸ್ಕೂಲ್‌ನ ಮುಖ್ಯಶಿಕ್ಷಕ ಮುನಿರಾಜ್ ರೆಂಜಾಳಾ, ಪಾದುವಾ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಆಲ್ವಿನ್ ಸೆರಾವೊ ಮಾತನಾಡಿದರು. ಮಂಗಳೂರು ಧರ್ಮಪ್ರಾಂತದ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತದ ‘ಲಾವ್ದಾತೊ ಸಿ’ ಸಮಿತಿಯ ಸಂಚಾಲಕ ರೆ.ಫಾ.ರಿಚರ್ಡ್ ಡಿಸೋಜ ಸ್ವಾಗತಿಸಿದರು. ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ರೆ.ಫಾ.ಜೆ.ಬಿ.ಸಲ್ಡಾನ್ಹ ಅತಿಥಿಗಳನ್ನು ಪರಿಚಯಿಸಿದರು. ವರ್ಣಚಿತ್ರಗಾರ್ತಿ ಶಬರಿ ಗಾಣಿಗ ಅವರು ವಿಶ್ವ ಪರಿಸರ ಸಂರಕ್ಷಣೆ ಸಂದೇಶ ನೀಡುವ ವರ್ಣಚಿತ್ರ ಬಿಡಿಸಿ, ಸಭಿಕರ ಮನಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News