ಮೂಡುಬಿದಿರೆ: 'ವಿ ರಿಂಗ್ ದ ಬೆಲ್' ಅಭಿಯಾನ

Update: 2019-03-13 17:36 GMT

ಮೂಡುಬಿದಿರೆ: ವಿಕಲಚೇತನ ಮಕ್ಕಳು ಇತರ ಮಕ್ಕಳೊಂದಿಗೆ ಸೇರಿ ಸಾಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶ ಒದಗಿಸುವಂತೆ ಸಮಾಜವನ್ನು ಎಚ್ಚರಿಸುವ ಸಲುವಾಗಿ `ವಿ ರಿಂಗ್ ದ ಬೆಲ್' ಅಭಿಯಾನವನ್ನು ವಿಶ್ವದಾದ್ಯಂತ ಬುಧವಾರ ನಡೆಸಲಾಗುತ್ತಿದ್ದು, ದ.ಕ. ಉಡುಪಿ ಜಿಲ್ಲೆಯ ಆಯ್ದ 100 ಕ್ಕೂ ಅಧಿಕ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಮೂಡುಬಿದಿರೆಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ವತಿಯಿಂದ ಕ್ಷೇತ್ರ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಆಯೋಜಿಸಲಾಗಿತ್ತು.  

ಮೂಡುಬಿದಿರೆ ವಲಯದ 66 ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಬೆಳಿಗ್ಗೆ 9.30.ರಿಂದ 10 ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ  ವಿದ್ಯಾರ್ಥಿಗಳು ಘೋಷಣೆ, ಮೆರವಣಿಗೆಯೊಂದಿಗೆ ಎಚ್ಚರಿಕೆಯ ಗಂಟೆ ಬಾರಿಸಿ "ವಿಕಲಚೇತನ ಮಕ್ಕಳಿಗೂ ಸಾಮಾನ್ಯ ಶಿಕ್ಷಣ ನೀಡುವಂತಾಗಬೇಕು, ವಿಕಲಚೇತನ ಮಕ್ಕಳೆಂದು ತಾರತಮ್ಯ ಮಾಡುವುದಿಲ್ಲ" ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಸಮನ್ವಯ ಶಿಕ್ಷಣ ಕೇಂದ್ರದ ಅಧಿಕಾರಿಗಳು, ಆದರ್ಶ ಸಂಸ್ಥೆಯ ಕಾರ್ಯಕರ್ತರು, ಸ್ವಯಂ ಸೇವಕರು ಭಾಗವಹಿಸಿದ್ದರು. ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು ಹದಿಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿಶ್ವದಾದ್ಯಂತ ಸುಮಾರು 3 ಮಿಲಿಯನ್ ವಿಕಲಚೇತನ ಮಕ್ಕಳು ಸಾಮಾನ್ಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಭಾರತದಲ್ಲಿ ಸರಿ ಸುಮಾರು 130 ಲಕ್ಷ ವಿಕಲಚೇತನ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಶೇ.1 ಮಕ್ಕಳು ಮಾತ್ರ ಸಾಮಾನ್ಯ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗಿದೆ. ಈ ನಿಟ್ಟಿ ನಲ್ಲಿ ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News