ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸಲು ವಿಫಲವಾದರೆ ಸ್ಥಿರತೆಗೆ ಹಿನ್ನಡೆ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2019-03-13 17:44 GMT

ವಾಶಿಂಗ್ಟನ್, ಮಾ. 13: ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್‌ನ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಯತ್ನ ವಿಫಲವಾದರೆ, ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಅಮೆರಿಕ ಮತ್ತು ಚೀನಾಗಳ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ ಎಂಬ ಎಚ್ಚರಿಕೆಯನ್ನು ಅಮೆರಿಕ ಮಂಗಳವಾರ ಚೀನಾಕ್ಕೆ ನೀಡಿದೆ.

ಅಝರ್‌ನನ್ನು ಭಯೋತ್ಪಾದಕ ಎಂಬುದಾಗಿ ಘೋಷಿಸುವಂತೆ ಕೋರಿ ಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್‌ಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿರುವ ನಿರ್ಣಯವನ್ನು ವಿರೋಧಿಸಲು ನಿಗದಿಪಡಿಸಲಾಗಿರುವ 10 ದಿನಗಳ ಅವಧಿ ಬುಧವಾರ ಕೊನೆಗೊಳ್ಳುತ್ತದೆ.

ಈ ನಿರ್ಣಯ ಅಂಗೀಕಾರಗೊಂಡರೆ, ವಿಶ್ವಸಂಸ್ಥೆಯ ಸದಸ್ಯ ದೇಶಗಳು ಮಸೂದ್ ಅಝರ್‌ನಿಗೆ ಆತಿಥ್ಯ ನೀಡುವಂತಿಲ್ಲ, ಶಸ್ತ್ರಗಳನ್ನು ಕೊಡುವಂತಿಲ್ಲ ಹಾಗೂ ನಿಧಿ ಪೂರೈಸುವಂತಿಲ್ಲ.

ಭದ್ರತಾ ಮಂಡಳಿಯ 15 ಸದಸ್ಯರ ಪೈಕಿ ಯಾರೊಬ್ಬರೂ ಸಂಜೆ 3 ಗಂಟೆಯವರೆಗೆ (ಭಾರತೀಯ ಸಮಯ ಗುರುವಾರ ಮುಂಜಾನೆ 12:30) ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸದಿದ್ದರೆ, ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುವುದು.

ಈ ಪಟ್ಟಿಯಲ್ಲಿ ಈಗಾಗಲೇ ಅವನ ಸಂಘಟನೆ ಜೈಶೆ ಮುಹಮ್ಮದ್, ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರೆ ತಯ್ಯಬ ಮತ್ತು ಅದರ ಮುಖ್ಯಸ್ಥ ಹಫೀಝ್ ಸಯೀದ್ ಹಾಗೂ ಇತರ ಹಲವಾರು ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳು ಇವೆ.

 ‘‘ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಅಮೆರಿಕ ಮತ್ತು ಚೀನಾಗಳು ಸಮಾನ ಉದ್ದೇಶ ಹೊಂದಿವೆ ಹಾಗೂ ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವಲ್ಲಿನ ವೈಫಲ್ಯವು ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಡಚಣೆಯಾಗುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ರಾಬರ್ಟ್ ಪ್ಯಾಲಡಿನೊ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ ಕನಿಷ್ಠ 40 ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸಕ್ತ ನಿರ್ಣಯವು ಮಹತ್ವ ಪಡೆದುಕೊಂಡಿದೆ.

ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News