ಕಪಿಲ್, ಸಚಿನ್‌ಗೆ ‘ನೈಟ್’ ಬಿರುದು ಯಾಕೆ ನೀಡಬಾರದು?

Update: 2019-03-13 17:48 GMT

ಲಂಡನ್, ಮಾ. 13: ಸರ್ ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯ) ಮತ್ತು ಸರ್ ರಿಚರ್ಡ್ ಹ್ಯಾಡ್ಲೀ (ನ್ಯೂಝೀಲ್ಯಾಂಡ್) ಮುಂತಾದ ಕ್ರಿಕೆಟ್ ದಂತಕತೆಗಳಿಗೆ ‘ನೈಟ್’ ಬಿರುದು ನೀಡಬಹುದಾದರೆ, ಕಪಿಲ್‌ದೇವ್, ಸಚಿನ್ ತೆಂಡುಲ್ಕರ್, ಇಮ್ರಾನ್ ಖಾನ್ ಮತ್ತು ವಾಸಿಂ ಅಕ್ರಂ ಮುಂತಾದ ಕಾಮನ್‌ವೆಲ್ತ್ ದೇಶಗಳ ದಂತಕತೆಗಳಿಗೆ ಯಾಕೆ ನೀಡಬಾರದು?

ಈ ಪ್ರಶ್ನೆಯನ್ನು ಕೇಳಿದ್ದು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಸಂಸದ ರೆಹ್ಮಾನ್ ಚಿಶ್ಟಿ. ಸೋಮವಾರ ಬ್ರಿಟನ್ ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಕಾಮನ್‌ವೆಲ್ತ್ ದಿನಾಚರಣೆಯ ಸಂದರ್ಭದಲ್ಲಿ ನಡೆದ ಚರ್ಚೆಯ ವೇಳೆ ಅವರು ಈ ಪ್ರಶ್ನೆಯನ್ನು ಕೇಳಿದರು.

ಇದೇ ಸಂದರ್ಭದಲ್ಲಿ ವೆಸ್ಟ್‌ಮಿನ್‌ಸ್ಟರ್ ಆ್ಯಬೆಯಲ್ಲಿ ನಡೆದ ಕಾಮನ್‌ವೆಲ್ತ್ ದಿನಾಚರಣೆಯಲ್ಲಿ ಮಹಾರಾಣಿ ಎಲಿಝಬೆತ್ ಭಾಗವಹಿಸಿದರು.

ಕಾಮನ್‌ವೆಲ್ತ್‌ನಲ್ಲಿ ಕ್ರಿಕೆಟ್ ಎನ್ನುವುದು ಎಲ್ಲರೂ ಅನುಸರಿಸುತ್ತಿರುವ ವೌಲ್ಯವಾಗಿದೆ ಎಂಬುದಾಗಿ ವಿದೇಶ ಕಚೇರಿ ಕಾರ್ಯದರ್ಶಿ ಹ್ಯಾರಿಯಟ್ ಬಾಲ್ಡ್‌ವಿನ್ ಹೇಳಿದಾಗ, ಚಿಶ್ಟಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಕಾಮನ್‌ವೆಲ್ತ್ ದೇಶಗಳ ಯಾವುದೇ ಕ್ರಿಕೆಟರ್‌ಗಳಿಗೆ ಈ ಗೌರವವನ್ನು ಈವರೆಗೆ ನೀಡದಿರುವುದು ‘ವಿರೋಧಾಭಾಸ’ವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೆ ಬಾಲ್ಡ್‌ವಿನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

 ‘‘ಮೇಡಮ್ ಉಪ ಸ್ಪೀಕರ್ ಅವರೇ, ಕಾಮನ್‌ವೆಲ್ತ್ ದೇಶಗಳ ಕ್ರಿಕೆಟರ್‌ಗಳಿಗೆ ನೈಟ್ ಬಿರುದಿನ ಗೌರವ ನೀಡಬೇಕೆಂದು ಕೋರಿ ಮಹಾರಾಣಿಯವರಿಗೆ ಮಾಡಿರುವ ಇಂಥ ಪ್ರಬಲ ಮನವಿಯನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಈ ಮನವಿ ಸಂಬಂಧಪಟ್ಟ ಜನರನ್ನು ತಲುಪುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News