ಬಿ.ಸಿ.ರೋಡ್ ಜಂಕ್ಷನ್‍ ಸರ್ವಿಸ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಕ್ರಮ: ಬಂಟ್ವಾಳ ಎಎಸ್ಪಿ

Update: 2019-03-13 18:20 GMT

ಬಂಟ್ವಾಳ, ಮಾ. 13: ಬಿ.ಸಿ.ರೋಡ್ ಜಂಕ್ಷನ್‍ನಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಇತ್ತೀಚೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

ಬಿ.ಸಿ.ರೋಡ್ ಸರ್ವಿಸ್ ರಸ್ತೆಯಲ್ಲಿ ಸರಕಾರಿ, ಖಾಸಗಿ ಬಸ್‍ಗಳ ಸಂಚಾರ ನಿರ್ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು, ಸರ್ವಿಸ್ ರಸ್ತೆಯಲ್ಲಿ ಪ್ರಸ್ತುತ ಬಸ್‍ಗಳು ನಿಲ್ಲಿಸುತ್ತಿರುವ ಸ್ಥಳದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೇವಲ ಅಂದಾಜು 100-150 ಮೀ. ದೂರವಿದ್ದು, ಸರ್ವಿಸ್ ರಸ್ತೆಯಲ್ಲಿ ಯಾವುದೇ ಅಧಿಕೃತ ತಂಗುದಾಣಗಳು ಇರುವುದಿಲ್ಲ. ಅದಲ್ಲದೆ, ಬಿ.ಸಿ.ರೋಡ್ ಜಂಕ್ಷನ್‍ನ ಮೇಲ್ಸೆತುವೆಯ ಕೆಳಗಡೆ ತರಕಾರಿ ಮಾರಾಟಗಾರರು ವ್ಯಾಪಾರ ಮಾಡುತ್ತಿರುವುದರಿಂದ ಜನರು ರಸ್ತೆಯಲ್ಲಿಯೇ ನಿಂತು ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿಗೆ ಬಂಟ್ವಾಳಪೇಟೆ, ಕೈಕುಂಜೆ ಕಡೆಯಿಂದ ಜನರು ಬಂದು ಸೇರುವುದರಿಂದ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಬಸ್‍ಗಳು ಇದೇ ಸ್ಥಳದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಹಾಗೂ ಜನಜಂಗುಳಿ ಉಂಟಾಗುತ್ತಿದೆ. ಇದೇ ಸ್ಥಳದಲ್ಲಿ ಬಸ್‍ಗಳನ್ನು ನಿಲ್ಲಿಸಿದ ಜನರನ್ನು ಹತ್ತಿಸಿ ಇಳಿಸುವುದನ್ನು ಮಾಡುವುದರಿಂದ ಅಪಘಾತ ಘಟನೆಗಳು ನಡೆದು ಕಾನೂನು ಸುವ್ಯವಸ್ಥೆಗೂ ತೊಂದರೆಯಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಲ್ಲಿನ ಸರ್ವಿಸ್ ರಸ್ತೆಯ ಅಗಲವು ಕೇವಲ 17 ರಿಂದ 22 ಅಡಿ ಅಗಲವಿದ್ದು, ಇದರಿಂದ ಇಲ್ಲಿ ಬಸ್ ಬಂದು ನಿಲುಗಡೆ ಮಾಡಿದಲ್ಲಿ ಅದರ ಹಿಂದೆ ಹಲವಾರು ವಾಹನಗಳು ಬಂದು ನಿಲ್ಲುವುದರಿಂದ ನಿರಂತರವಾಗಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿರುತ್ತಾರೆ. ಸರ್ವಿಸ್ ರಸ್ತೆಯ ಪ್ರಸ್ತುತ ಬಸ್ ನಿಲುಗಡೆ ಮಾಡುತ್ತಿರುವ ಸ್ಥಳದಲ್ಲಿ ಬಂಟ್ವಾಳ ಸಂಚಾರ ಠಾಣೆಯ ಎಸ್ಸೈ ಅಧ್ಯಯನ ನಡೆಸಿದ್ದು, ತಾನು ಖುದ್ದಾಗಿ ಈ ಸಮಸ್ಯೆಯನ್ನು ಮನಗಂಡು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದು, ಸಾರ್ವಜನಿಕರು ಈ ವ್ಯವಸ್ಥೆಗೆ ಸಹಕಾರವನ್ನು ನೀಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಅಟೊ ರಿಕ್ಷಾ ಪಾರ್ಕಿಂಗ್:

ಈ ಪರ್ಯಾಯ ವ್ಯವಸ್ಥೆಗೆ ಕೆಲವು ಅಟೊ ಚಾಲಕರು ವಿರೋಧ ವ್ಯಕ್ತಪಡಿಸಿರುತ್ತಾರೆ. ಅಟೊ ಚಾಲಕರೊಂದಿಗೆ ಮಾತುಕತೆ ನಡೆಸಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ಅಟೊ ರಿಕ್ಷಾ ಪಾರ್ಕಿಂಗ್ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಮತ್ತು ಸ್ಥಳೀಯ ಪುರಸಭೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಟೊ ಚಾಲಕರಿಗೆ ಆಗುತ್ತಿರುವ ಅನಾನುಕೂಲತೆ ನಿವಾರಿಸಲು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News