ಅಮೆರಿಕದಲ್ಲೂ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಸೇವೆಯಿಂದ ಹೊರಗೆ

Update: 2019-03-14 16:14 GMT

ವಾಶಿಂಗ್ಟನ್, ಮಾ. 14: ಇಥಿಯೋಪಿಯನ್ ಏರ್‌ಲೈನ್ಸ್‌ನ ವಿಮಾನವೊಂದು ರವಿವಾರ ಪತನಗೊಂಡ ಬಳಿಕ, ಸುರಕ್ಷತೆಗೆ ಬೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ, ಅಮೆರಿಕವು ಬುಧವಾರ ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿದೆ.

ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ‘ಬೋಯಿಂಗ್ 737 ಮ್ಯಾಕ್ಸ್ 8’ ವಿಮಾನ ದುರಂತದಲ್ಲಿ 157 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜಗತ್ತಿನಾದ್ಯಂತದ ಹೆಚ್ಚಿನ ದೇಶಗಳು ಈಗಾಗಲೇ ಬೋಯಿಂಗ್ ಕಂಪೆನಿಯ ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟ ಹಿನ್ನೆಲೆಯಲ್ಲಿ, ಜಗತ್ತಿನ ಅತಿ ದೊಡ್ಡ ವಿಮಾನ ತಯಾರಿಕಾ ಕಂಪೆನಿ ತನ್ನ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದೆ.

ಅಪಘಾತ ಕುರಿತಂತೆ ಉಪಗ್ರಹ ಮಾಹಿತಿ ಹಾಗೂ ಅಪಘಾತದ ಸ್ಥಳದಿಂದ ಪಡೆದ ಪುರಾವೆಗಳನ್ನು ವಿಶ್ಲೇಷಿಸಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ವಾಯುಯಾನ ಇಲಾಖೆ ಹೇಳಿದೆ.

► 2 ಅಪಘಾತಗಳ ನಡುವೆ ಸಾಮ್ಯತೆ?

ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದಲ್ಲಿ ನಡೆದ ವಿಮಾನ ಅಪಘಾತವು ಅತ್ಯಂತ ಆಧುನಿಕ ‘ಬೋಯಿಂಗ್ 737 ಮ್ಯಾಕ್ಸ್’ ವಿಮಾನವನ್ನೊಳಗೊಂಡ ಎರಡನೇ ಅಪಘಾತವಾಗಿದೆ. ಮೊದಲ ಅಪಘಾತವು ನವೆಂಬರ್‌ನಲ್ಲಿ ಇಂಡೋನೇಶ್ಯದಲ್ಲಿ ನಡೆದಿತ್ತು. ಆ ಅಪಘಾತದಲ್ಲಿ 189 ಮಂದಿ ಮೃತಪಟ್ಟಿದ್ದರು.

‘‘ಇಥಿಯೋಪಿಯದಲ್ಲಿ ಪತ್ತೆಯಾದ ಅವಶೇಷಗಳು ಮತ್ತು ವಿಮಾನದ ಹಾರಾಟ ಮಾರ್ಗದ ಬಗ್ಗೆ ಹೊಸದಾಗಿ ಸಂಗ್ರಹಿಸಲ್ಪಟ್ಟ ಮಾಹಿತಿಗಳು ಎರಡು ಅಪಘಾತಗಳ ನಡುವೆ ಸಾಮ್ಯತೆಗಳನ್ನು ತೋರಿಸಿವೆ. ಹಾಗಾಗಿ, ಅಪಘಾತದ ಕಾರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುವ ಅಗತ್ಯವಿದೆ’’ ಎಂದು ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬೋಯಿಂಗ್‌ನ 41.64 ಲಕ್ಷ ಕೋಟಿ ರೂ. ವ್ಯಾಪಾರಕ್ಕೆ ಕುತ್ತು ಎದುರಾಗಿದೆ.ಅಮೆರಿಕದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್‌ನ ‘737 ಮ್ಯಾಕ್ಸ್’ ಮಾದರಿಯ ಎರಡು ವಿಮಾನಗಳು ಐದು ತಿಂಗಳ ಅಂತರದಲ್ಲಿ ಪತನಗೊಂಡಿರುವ ಹಿನ್ನೆಲೆಯಲ್ಲಿ, ಕಂಪೆನಿಯ 600 ಬಿಲಿಯ ಡಾಲರ್ (41.64 ಲಕ್ಷ ಕೋಟಿ ರೂಪಾಯಿ) ಮೊತ್ತದ ವ್ಯಾಪಾರಕ್ಕೆ ಕುತ್ತು ಎದುರಾಗಿದೆ.

ವಿಯೆಟ್ನಾಮ್‌ನ ವಾಯುಯಾನ ಸಂಸ್ಥೆ ವಿಯೆಟ್‌ಜೆಟ್ ಏವಿಯೇಶನ್ ಜೆಎಸ್‌ಸಿ ಕಳೆದ ತಿಂಗಳಷ್ಟೇ ವಿಮಾನಗಳಿಗಾಗಿನ ಬೇಡಿಕೆಯನ್ನು 25 ಬಿಲಿಯ ಡಾಲರ್ (1.73 ಲಕ್ಷ ಕೋಟಿ ರೂಪಾಯಿ)ಗೆ ದ್ವಿಗುಣಗೊಳಿಸಿತ್ತು. ಆದರೆ, ಅಪಘಾತಕ್ಕೆ ಕಾರಣ ಏನು ಎನ್ನುವುದು ತಿಳಿದ ಬಳಿಕ ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗ ಅದು ಹೇಳಿದೆ.

ಮ್ಯಾಕ್ಸ್ ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಕೆನ್ಯ ಏರ್‌ವೇಸ್ ಮರುಪರಿಶೀಲಿಸುತ್ತಿದೆ ಹಾಗೂ ಅದು ಫ್ರಾನ್ಸ್‌ನ ಏರ್‌ಬಸ್ ಎಸ್‌ಇ ಕಂಪೆನಿಯ ಎ320 ವಿಮಾನವನ್ನು ಖರೀದಿಗಾಗಿ ಪರಿಗಣಿಸುತ್ತಿದೆ.

ರಶ್ಯದ ‘ಯುಟೇರ್ ಏವಿಯೇಶನ್ ಪಿಜೆಎಸ್‌ಸಿ’ 30 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದು, ಮೊದಲ ವಿಮಾನವನ್ನು ಪಡೆಯುವ ಮುನ್ನ ವಿಮಾನಗಳ ಸುರಕ್ಷಾ ಖಾತರಿ ಕೋರಲಿದೆ.

ಈವರೆಗೆ, ಬೋಯಿಂಗ್ 737 ಮ್ಯಾಕ್ಸ್ ಮಾದರಿಯ 5,000ಕ್ಕೂ ಅಧಿಕ ವಿಮಾನಗಳಿಗಾಗಿ 600 ಬಿಲಿಯ ಡಾಲರ್ (41.64 ಲಕ್ಷ ಕೋಟಿ ರೂಪಾಯಿ)ಗಿಂತಲೂ ಅಧಿಕ ಮೊತ್ತದ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಈ ಪೈಕಿ ಹಲವು ವಿಮಾನಗಳನ್ನು ಈಗಾಗಲೇ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News