ತಮ್ಮನ್ನು ಕೊಲ್ಲಲು ಬಂದ ಉಗ್ರನಿಗೆ 'ಹಲೋ ಬ್ರದರ್' ಎಂದು ಸ್ವಾಗತಿಸಿದ್ದರು ಮಸೀದಿಯಲ್ಲಿದ್ದವರು!

Update: 2019-03-16 06:00 GMT

ಕ್ರೈಸ್ಟ್ ಚರ್ಚ್, ಮಾ.16: ನ್ಯೂಝಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿಯಲ್ಲಿ ಶುಕ್ರವಾರ ಏಕಾಏಕಿ ಗುಂಡು ಹಾರಾಟ ನಡೆಸಿ ಹಲವರನ್ನು ಕೊಲ್ಲಲು ಬಂದಿದ್ದ ವ್ಯಕ್ತಿ ಒಬ್ಬ ಉಗ್ರ ಎಂದು ಅರಿಯದೆ ಆತ ತನ್ನನ್ನು ಗುಂಡಿಕ್ಕಿ ಕೊಲ್ಲುವ ಕೆಲವೇ ಕ್ಷಣಗಳ ಮುಂಚೆ ಈ ಹತ್ಯಾಕಾಂಡದಲ್ಲಿ ಮೊದಲು ಬಲಿಯಾದ ವ್ಯಕ್ತಿ ಆ ಉಗ್ರನಿಗೆ ‘‘ಹಲೋ ಬ್ರದರ್’’ ಎಂದು ಸ್ವಾಗತಿಸಿದ್ದರೆಂದು ತಿಳಿದು ಬಂದಿದೆ.

ಬಂದೂಕುಧಾರಿ ಉಗ್ರ ಸೆಂಟ್ರಲ್ ಕ್ರೈಸ್ಟ್ ಚರ್ಚ್ ನಲ್ಲಿರುವ ಅಲ್ ನೂರ್ ಮಸೀದಿಯ ಪ್ರವೇಶದ್ವಾರದಲ್ಲಿ ಕಾಣಿಸುತ್ತಿದ್ದಂತೆಯೇ ಇನ್ನಷ್ಟೇ ಗುರುತಿಸಬೇಕಾದ ವ್ಯಕ್ತಿಯೊಬ್ಬರು ‘‘ಹಲೊ ಬ್ರದರ್’’ ಎಂದು ಹೇಳುತ್ತಿರುವುದು ಉಗ್ರ ನೇರ ಪ್ರಸಾರ ಮಾಡಿದ್ದ ವೀಡಿಯೋದಲ್ಲಿ ಕೇಳಿಸುತ್ತದೆ.

ಒಟ್ಟು 49 ಮಂದಿಯನ್ನು ಬಲಿ ಪಡೆದುಕೊಂಡ ಹಾಗೂ ಹಲವಾರು ಮಂದಿ ಗಾಯಗೊಂಡ ಈ ಭೀಕರ ಉಗ್ರ ದಾಳಿಯಿಂದ ಇಡೀ ದೇಶವೇ ಆಘಾತಕ್ಕೀಡಾಗಿರುವಂತೆಯೇ ತನ್ನನ್ನು ಉಗ್ರ ಕೊಲ್ಲುವ ಕೆಲವೇ ಕ್ಷಣಗಳ ಮೊದಲು ಆತನಿಗೆ 'ಹಲೊ ಬ್ರದರ್' ಹೇಳಿದ ಮುಸ್ಲಿಂ ವ್ಯಕ್ತಿಗೆ ಸಾಮಾಜಿಕ ಜಾಲತಾಣಿಗರು ಶ್ಲಾಘಿಸಿದ್ದಾರೆ.

‘‘ಆತ ಬಂದೂಕು ಎದುರಿಸುವ ಮುನ್ನ ಆತನ ಕೊನೆಯ ಶಬ್ದಗಳು ಬೇಷರತ್ ಪ್ರೀತಿಯ, ಶಾಂತಿಯ ಪ್ರತೀಕಗಳಾಗಿತ್ತು, ಅಹಿಂಸೆ ದುರ್ಬಲ ಎಂದು ಹೇಳಬೇಡಿ’ ಎಂದು ಒಬ್ಬರು ಟ್ವಿಟ್ಟರಿಗ ಹೇಳಿದ್ದಾರೆ. ‘‘ಶಾಂತಿ ತುಂಬಿದ್ದ ಪರಿಶುದ್ಧ ಆತ್ಮದಿಂದ ಕೇಳಿಬಂದ ಶಬ್ದಗಳಾಗಿದ್ದವು 'ಹಲೊ ಬ್ರದರ್'. 'ಹಲೋ ಬ್ರದರ್'ನನ್ನು ಗುಂಡಿಕ್ಕಿ ಸಾಯಿಸಲಾಯಿತು’’ ಎಂದು ಇನ್ನೊಬ್ಬರು ಬರೆದಿದ್ದಾರೆ.

‘‘ಪ್ರಾಯಶಃ ಅಲ್ಲಾಹ್ ಈ ವ್ಯಕ್ತಿಯ ಮೂಲಕ ಇಸ್ಲಾಂ ಶಾಂತಿ ಹಾಗೂ ಪ್ರೀತಿಯ ದ್ಯೋತಕ ಎಂದು ತೋರಿಸಲು ಯತ್ನಿಸಿದ್ದಾರೆ. ಹಿಂಸೆಯನ್ನು ಉತ್ತೇಜಿಸುವ ಬದಲು ಅದನ್ನು ನಿಲ್ಲಿಸುವ ಪ್ರಾಮಾಣಿಕ ಮತ್ತು ದಿಟ್ಟ ಯತ್ನ’’ ಎಂದು ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News