×
Ad

ನರೇಂದ್ರ ಮೋದಿಗೆ ಪರ್ಯಾಯ ನಾಯಕತ್ವ: ನಿತಿನ್ ಗಡ್ಕರಿ ಹೇಳಿದ್ದೇನು ?

Update: 2019-03-20 09:56 IST

ಹೊಸದಿಲ್ಲಿ, ಮಾ. 20: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿಯುವ ಸಾಧ್ಯತೆ ಇಲ್ಲ; ಅಂತೆಯೇ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕತ್ವ ರೂಪುಗೊಳ್ಳುತ್ತದೆ ಎಂದು ಭಾವಿಸುವ "220 ಕ್ಲಬ್" ಬಿಜೆಪಿಯಲ್ಲಿಲ್ಲ. ಇದು ಕೇವಲ ಮಾಧ್ಯಮ ವಲಯದ ಊಹೆ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ಬಹುಮತದ ಕೊರತೆ ಎದುರಾದಲ್ಲಿ ಬಿಜೆಪಿಯಲ್ಲಿ ಎಲ್ಲರಿಗೂ ಸ್ವೀಕಾರಾರ್ಹವಾಗುವ ವ್ಯಕ್ತಿ ಎಂದು ಬಿಂಬಿಸಲಾಗುತ್ತಿರುವ ಗಡ್ಕರಿ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಪಕ್ಷದಲ್ಲಿ ಇಂಥ ಯಾವ ಚರ್ಚೆಯೂ ನಡೆದಿಲ್ಲ. ಮೋದಿ ನಾಯಕತ್ವದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ನಮಗಿದೆ" ಎಂದು ಪ್ರತಿಪಾದಿಸಿದ್ದಾರೆ.

"ಅಂಥ ಯಾವ ವಿಷಯವೂ ಇಲ್ಲ. ಯಾರು ಬರೆಯಲು ಬಯಸುತ್ತಾರೋ ಅವರು ಬರೆಯುತ್ತಿದ್ದಾರೆ" ಎಂದು ಹೇಳಿದರು. "ನಾನು ಅಂಥ ಲೆಕ್ಕಾಚಾರವನ್ನೇ ಮಾಡಿಲ್ಲ ಅಥವಾ ಅಂಥ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ನಾನು ಪಕ್ಷದ ಕಾರ್ಯಕರ್ತ. ಮೋದಿಯವರ ಕೆಲಸದ ಪರಿಣಾಮವಾಗಿ ಪೂರ್ಣ ಬಹುಮತ ನಮಗೆ ಬರುತ್ತದೆ ಎಂಬ ಖಾತರಿ ಇದೆ. ಅಂಥ ಪರಿಸ್ಥಿತಿಯೇ ಉದ್ಭವಿಸದು" ಎಂದು ಹೇಳಿದರು.

ಪ್ರಧಾನಿ ಮೋದಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಗಡ್ಕರಿ ಆಪಾದಿಸಿದರು. "ಜನ ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು. ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಒಳ್ಳೆಯದಲ್ಲ. ಕಾಂಗ್ರೆಸ್ ಇದನ್ನು ಮಾಡುತ್ತಿರುವುದು ದುರದೃಷ್ಟಕರ" ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News