ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ !

Update: 2019-03-20 05:26 GMT

ಇಟಾನಗರ, ಮಾ. 20: ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲೇ ಇಬ್ಬರು ಹಾಲಿ ಸಚಿವರು ಮತ್ತು ಆರು ಮಂದಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಗೆ ಸೇರಿ ಆಡಳಿತಾರೂಢ ಬಿಜೆಪಿಗೆ ಶಾಕ್ ನೀಡಿದ್ದಾರೆ.

ಗೃಹ ಸಚಿವ ಕುಮಾರ್ ವಾಯೀ, ಪ್ರವಾಸೋದ್ಯಮ ಖಾತೆ ಸಚಿವ ಜರ್ಕರರ್ ಗಮ್ಲಿನ್ ಮತ್ತು ಆರು ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು.

ಕೇಂದ್ರ ನಾಯಕತ್ವಕ್ಕೆ ಸೆಡ್ಡುಹೊಡೆದ ಈ ಎಂಟು ಮಂದಿ ಪಕ್ಷದಿಂದ ಹೊರನಡೆದಿದ್ದಾರೆ. "ಸುಳ್ಳು ಭರವಸೆಗಳಿಂದಾಗಿ ಬಿಜೆಪಿ ಜನರ ದೃಷ್ಟಿಯಲ್ಲಿ ಗತವೈಭವವನ್ನು ಕಳೆದುಕೊಂಡಿದೆ" ಎಂದು ವಾಯೀ ಹೇಳಿದ್ದಾರೆ.

"ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೇ ಎನ್‌ಪಿಪಿ ಸರ್ಕಾರವನ್ನು ರಾಜ್ಯದಲ್ಲಿ ಸ್ಥಾಪಿಸುತ್ತೇವೆ" ಎಂದು ಘೋಷಿಸಿದರು. ಎಂಟು ಬಿಜೆಪಿ ಶಾಸಕರ ಜತೆಗೆ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಒಬ್ಬ ಶಾಸಕ ಹಾಗೂ ಕೇಸರಿ ಪಕ್ಷದ 19 ಮುಖಂಡರು ಕೂಡಾ ಎನ್‌ಪಿಪಿಗೆ ಸೇರ್ಪಡೆಯಾದರು.

ಎನ್‌ಪಿಪಿ, ಬಿಜೆಪಿ ಬೆಂಬಲದೊಂದಿಗೆ ಮೇಘಾಲಯದಲ್ಲಿ ಅಧಿಕಾರದಲ್ಲಿದೆ. ಈ ಪಕ್ಷ, ಲೋಕಸಭಾ ಚುನಾವಣೆ ಜತೆಗೆ ಅರುಣಾಚಲ ಪ್ರದೇಶ ವಿಧಾನಸಭೆಗೂ ನಡೆಯುವ ಚುನಾವಣೆಯಲ್ಲಿ ಎಲ್ಲ 40 ಸ್ಥಾನಗಳಿಗೂ ಸ್ಪರ್ಧಿಸಲು ನಿರ್ಧರಿಸಿದೆ. "ಅರುಣಾಚಲ ಪ್ರದೇಶದಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತೇವೆ. ಬುಧವಾರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಥಾಮಸ್ ಸಂಗ್ಮಾ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News