ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಡಿ.ಕೆ. ಅರುಣಾ ಬಿಜೆಪಿಗೆ ಸೇರ್ಪಡೆ

Update: 2019-03-20 06:59 GMT

ಹೊಸದಿಲ್ಲಿ, ಮಾ.20: ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕಿ ಡಿ.ಕೆ.ಅರುಣಾ ಬುಧವಾರ ಬೆಳಗ್ಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲು ಈ ಬೆಳವಣಿಗೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ.

 ತೆಲಂಗಾಣದ ಕಾಂಗ್ರೆಸ್ ಈಗಾಗಲೇ 8 ಶಾಸಕರನ್ನು ಕಳೆದುಕೊಂಡಿದೆ. ಎಲ್ಲ ಶಾಸಕರು ರಾಜ್ಯದಲ್ಲಿ ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿಗೆ(ಟಿಆರ್‌ಎಸ್)ಪಕ್ಷಾಂತರ ಮಾಡಿದ್ದಾರೆ.

ಅರುಣಾ ಮೂರು ಬಾರಿ ಗಡ್ವಾಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸಾಥ್ ನೀಡಿದರು. ಮಾಧವ್ ಅವರು ಅರುಣಾರನ್ನು ಬಿಜೆಪಿ ಸೇರಲು ಮನವೊಲಿಸಿದ್ದರು.

59ರ ಹರೆಯದ ಅರುಣಾ ಬಾಲ್ಯದಿಂದಲೇ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೆಹಬೂಬ್‌ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಇದೇ ಕ್ಷೇತ್ರದಿಂದ ಟಿಕೆಟ್ ಆಫರ್ ನೀಡಿದಾಗ ಅರುಣಾ ನಿರಾಕರಿಸಿದ್ದರು.

ಇತ್ತೀಚೆಗೆ ನಡೆದ ತೆಲಂಗಾಣ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ಅರುಣಾ ಇತರ ಹಿರಿಯ ಕಾಂಗ್ರೆಸ್ ನಾಯಕರಂತೆಯೇ ಟಿಆರ್‌ಎಸ್ ಅಭ್ಯರ್ಥಿಗೆ ಸೋತಿದ್ದರು.

17 ಲೋಕಸಭಾ ಕ್ಷೇತ್ರಗಳಿರುವ ತೆಲಂಗಾಣ ರಾಜ್ಯದ ಚುನಾವಣೆ ಎ.18ಕ್ಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News