ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಅಮೀನ್ ಮಟ್ಟು ಸಹಿತ ಐವರ ವಿರುದ್ಧ ಪ್ರಕರಣ ದಾಖಲು

Update: 2019-03-20 07:40 GMT

ಉಡುಪಿ, ಮಾ. 20: ಕಳೆದ ರವಿವಾರ ನಗರದ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ಸ್‌ನಲ್ಲಿ ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ನಡೆದ ಸರ್ವಜನೋತ್ಸವದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕಾಗಿ ಸಹಬಾಳ್ವೆಯ ಅಧ್ಯಕ್ಷ ಅಮೃತ ಶೆಣೈ ಸೇರಿದಂತೆ ಐವರು ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್-2ರ ಅಧಿಕಾರಿ ಕೆ.ವಿ.ನಾಗರಾಜ್ ಅವರು ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಹಿರಿಯ ಪತ್ರಕರ್ತ ಹಾಗೂ ಚಿಂತಕ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ರಾಜ್ಯ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಜಿ.ಎನ್. ನಾಗರಾಜ್ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಇವರ ವಿರುದ್ಧ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಅಮೃತ ಶೆಣೈ ನೇತೃತ್ವದಲ್ಲಿ ಮಾ. 17ರಂದು ರಾಯಲ್ ಗಾರ್ಡನ್ ಮೈದಾನದಲ್ಲಿ ನಡೆದ ಸಹಬಾಳ್ವೆ ಸಭೆಯಲ್ಲಿ ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಜಿ.ಎನ್.ನಾಗರಾಜ್, ಇಂದೂಧರ ಹೊನ್ನಾಪುರ ಇವರು ತಮ್ಮ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂತೆ ಮುಂಬರುವ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ಚಲಾಯಿಸುವಂತೆ ಕರೆ ನೀಡಿದ್ದಲ್ಲದೇ, ಕಾರ್ಯಕ್ರಮಕ್ಕೆ ಅನುಮತಿ ಪಡೆದ ಅಮೃತ ಶೆಣೈ ಇವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದಾಗಿ ನಾಗರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನಗರ ಠಾಣೆಯಲ್ಲಿ ಕಲಂ:153ಎ, 295ಎ ಐಪಿಸಿ ಹಾಗೂ 125 ಆರ್.ಪಿ.ಆಕ್ಟ್ 1951ರಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News