ಭಟ್ಕಳ ತಾಲೂಕಿನ 9 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: 1930 ವಿದ್ಯಾರ್ಥಿಗಳು

Update: 2019-03-20 12:18 GMT

ಭಟ್ಕಳ: ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಗಳು ಮಾ. 21ರಿಂದ ಆರಂಭಗೊಳ್ಳುತ್ತಿದ್ದು ಭಟ್ಕಳ ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ 1930 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರವನ್ನು ನೀಡಿದ ಅವರು ಪರೀಕ್ಷೆಗೆ ಬೇಕಾದಂತಹ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು ಯಾವುದೇ ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆಯನ್ನು ವಹಿಸಲಾಗಿದೆ ಎಂದರು. 

927 ಬಾಲಕರು ಹಾಗೂ 1003 ಬಾಲಕಿಯರು ಈ ಸಲ ಮೊದಲ ಬಾರಿ ಪರೀಕ್ಷೆಗೆ ಕುಳಿತುಕೊಂಡಿದ್ದು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. 9 ಕೇಂದ್ರಗಳಿಗೆ  ಮುಖ್ಯ ಮೇಲ್ವಿಚಾರಕರು, ಸಿಟಿಂಗ್ಸ್ ಸ್ಕ್ವಾಡ್ಸ್ ಹಾಗೂ 9 ಮಂದಿ ವೀಕ್ಷಕರನ್ನು ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ 2 ಸಂಚಾರಿ ಜಾಗೃತ ದಳ ಹಾಗೂ ಬೇರೆ ಜಿಲ್ಲೆಯಿಂದ ಪ್ಲಾಯಿಂಗ್ ಸ್ಕ್ವಾಡ್ಸ್ ಗಳನ್ನೂ ನೇಮಿಸಿದ್ದು ಪರೀಕ್ಷೆಯನ್ನು ಸುಗಮವಾಗಿ ನಡೆಯುವಂತೆ ವ್ಯವಸ್ಥೇಯನ್ನು ಮಾಡಲಾಗಿದೆ. 

ಕಳೆದ ವರ್ಷ 2145 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಶೇ.87.64 ಫಲಿತಾಂಶವನ್ನು ದಾಖಲಿಸಿ ಭಟ್ಕಳ ತಾಲೂಕು ಉ.ಕ.ಜಿಲ್ಲೆಗೆ ನಾಲ್ಕನೇ ಸ್ಥಾನವನ್ನು ಪಡೆದಿತ್ತು. ಆ ಹಿನ್ನೆಲೆಯಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ಹಲವು ಕ್ರಾಂತಿಕಾರಿ ಯೋಜನೆಗಳನ್ನು ವರ್ಷಪೂರ್ತಿ ಹಾಕಿಕೊಂಡಿದ್ದು ಶೇ. 95ಕ್ಕೂ ಹೆಚ್ಚು ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿಯನ್ನು ನೀಡುವ ವ್ಯವಸ್ಥೇಯನ್ನು ಕೈಗೊಳ್ಳಲಾಗಿದ್ದು ಜಿಲ್ಲಾ ತರಬೇತಿ ಕೇಂದ್ರ ಡಯಟ್ ನಿಂದ 2 ವಿಶೇಷ ಬೋಧನಾ ಕೇಂದ್ರಗಳಲ್ಲಿ 100 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ 5 ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ವ್ಯವಸ್ಥೇಯನ್ನು ಮಾಡಲಾಗಿದೆ ಎಂದೂ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ವಿಷಯ ಸಂಯೋಜಕರಾದ ಎಸ್.ಪಿ.ಭಟ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News