ಮಂಚಿ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ-ಕನ್ನಡಕ ವಿತರಣೆ

Update: 2019-03-20 13:05 GMT

ಬಂಟ್ವಾಳ, ಮಾ. 20: ಕಾಯಿಲೆ ಬಂದ ನಂತರ ವೈದ್ಯರ ಬಳಿ ತೆರಳುವುದಕ್ಕಿಂತ ಕಾಯಿಲೆ ಬಾರದ ಹಾಗೆ ಜೀವನ ನಡೆಸುವುದು ಅತೀ ಮುಖ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸಿದರೆ ಮುಂದೊಂದು ದಿನ ಜೀವಕ್ಕೆ ಆಪತ್ತು ಉಂಟಾಗಬಹುದು ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ನಿಯಮಿತ ಇದರ ಸಹಾಯಕ ವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ ತಿಳಿಸಿದ್ದಾರೆ.

ಅವರು ಸಿದ್ಧಿವಿನಾಯಕ ಭಜನಾ ಮಂದಿರ ಕುಕ್ಕಾಜೆಯಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಮಂಚಿ ಹಾಲು ಉತ್ಪಾದಕರ ಸಹಕಾರಿ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೊಯ ಡೀಮ್ಡ್ ಟು.ಬಿ ಯೂನಿವರ್ಸಿಟಿ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುರಳೀಧರ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ  ನಾಯ್ಕ್, ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್‍ನ ಕಿರಿಯ ಕಾರ್ಯ ನಿರ್ವಹಣಾಧಿಕಾರಿ ಸವಿಸ್ತಾರ್ ಆಳ್ವ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕೇಶವ ರಾವ್ ನೂಜಿಪ್ಪಾಡಿ, ಯೆನೆಪೊಯ ದಂತ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್ ಉಪಸ್ಥಿತರಿದ್ದರು.

ಅಶೋಕ್ ಸ್ವಾಗತಿಸಿ, ನಿರ್ಮಲ ವಂದಿಸಿ, ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಪ್ರದೀಪ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 260 ಗ್ರಾಮಸ್ಥರು ಈ ಶಿಬಿರದ ಪ್ರಯೋಜನವನ್ನು ಪಡೆದರು. 111 ಮಂದಿಗೆ ರಿಯಾಯತಿ ದರದಲ್ಲಿ ಕನ್ನಡಕ ವಿತರಿಸಲಾಯಿತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News