ಮಾ. 21ರಿಂದ ದ.ಕ.ಜಿಲ್ಲೆಯ 95 ಕೇಂದ್ರಗಳಲ್ಲಿ ಆರಂಭ: 31,192 ವಿದ್ಯಾರ್ಥಿಗಳು ಸಜ್ಜು

Update: 2019-03-20 13:13 GMT

ಮಂಗಳೂರು, ಮಾ.20: ದ.ಕ.ಜಿಲ್ಲೆಯ 95 ಕೇಂದ್ರಗಳಲ್ಲಿ ಮಾ.21ರಿಂದ ಆರಂಭಗೊಳ್ಳುವ ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಜಿಲ್ಲೆಯ 7 ಶಿಕ್ಷಣ ವಲಯ ವ್ಯಾಪ್ತಿಯ 16,645 ಬಾಲಕರು ಮತ್ತು 14,547 ಬಾಲಕಿಯರ ಸಹಿತ 31,192 ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

ಈಗಾಗಲೆ ಬಂಟ್ವಾಳ ವಲಯದಲ್ಲಿ 17, ಬೆಳ್ತಂಗಡಿ ವಲಯದಲ್ಲಿ 13, ಮಂಗಳೂರು ಉತ್ತರ ಮತ್ತು ದಕ್ಷಿಣ ವಲಯದಲ್ಲಿ ತಲಾ 21, ಮೂಡುಬಿದಿರೆ ವಲಯ ದಲ್ಲಿ 5, ಪುತ್ತೂರು ವಲಯದಲ್ಲಿ 12, ಸುಳ್ಯ ವಲಯದಲ್ಲಿ 90 ಸರಕಾರಿ ಮತ್ತು 5 ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆಸಲಾಗಿದ್ದು, ಗುರುವಾರದಿಂದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆ ಬರೆಯಲಿದ್ದಾರೆ.

95 ಪರೀಕ್ಷಾ ಕೇಂದ್ರಗಳ ಪೈಕಿ ಬಹುತೇಕ ಕಡೆ ವಿದ್ಯಾರ್ಥಿಗಳಿಗೆ ಸುಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿನ, ಶೌಚಾಲಯ, ಪೀಠೋಪಕರಣದ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸಲು ಹಬ್ಬದ ವಾತಾವರಣವನ್ನೇ ಮಾಡಲಾಗಿದೆ. ಅಂದರೆ ಸ್ವಾಗತ ಫಲಕ, ಬ್ಯಾನರ್ ಅಳವಡಿಕೆ, ಚೆಂಡೆ-ವಾದ್ಯ, ಗುಲಾಬಿ ಹೂ, ಶಿಕ್ಷಕ ವರ್ಗದಿಂದ ಮುಗುಳ್ನಗೆ ಇತ್ಯಾದಿ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ಪಾನೀಯ, ಫಲಾಹಾರದ ವ್ಯವಸ್ಥೆಯನ್ನೂ ಖಾಸಗಿಯಾಗಿ ಮಾಡಲಾಗಿದೆ. ಶಾಲಾಭಿವೃದ್ಧಿ ಮಂಡಳಿಯ ಉತ್ಸಾಹಕ್ಕೆ ಶಿಕ್ಷಣ ಇಲಾಖೆ ಕೂಡ ಸಾಥ್ ನೀಡಿರುವುದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News