ಮುಸ್ಲಿಂ ಮಹಿಳೆಯರ ವಿರುದ್ಧ ಅವಮಾನ: ಕಠಿಣ ಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ಆಗ್ರಹ

Update: 2019-03-20 13:39 GMT

ಬೆಂಗಳೂರು, ಮಾ.20: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಆಪ್ತೆ ರಂಜನಿ ಗೌಡ ಫೇಸ್‌ಬುಕ್ ಖಾತೆಯಲ್ಲಿ ಮುಸ್ಲಿಂ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ಅಸಹ್ಯಕರವಾಗಿ ಅಪಮಾನಿಸಿರುವುದನ್ನು ವಿಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ಕರ್ನಾಟಕ ರಾಜ್ಯ ಸಮಿತಿಯು ಖಂಡಿಸಿದೆ.

ಬುರ್ಖಾವು ಮುಸ್ಲಿಂ ಮಹಿಳೆಯರ ಅಭಿಮಾನದ ಸಂಕೇತವಾಗಿದ್ದು ಅದಕ್ಕೆ ಅದರದೇ ಆದ ಗೌರವವಿದೆ. ಆದಾಗ್ಯೂ ರಂಜನಿ ಗೌಡ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬುರ್ಖಾ ಸಹಿತ ಮುಸ್ಲಿಂ ಮಹಿಳೆಯರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದು ಅವರ ಸಂಸ್ಕೃತಿ ಹಾಗೂ ಮಹಿಳೆಯರ ಬಗೆಗಿರುವ ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮಾತೆತ್ತಿದರೆ ಸಂಸ್ಕೃತಿಯ ಉದ್ಭೋದನೆ ಮಾಡುವ ಆರೆಸ್ಸೆಸ್ ನ ಪೋಷಕ ಪಕ್ಷವಾಗಿರುವ ಬಿಜೆಪಿ ನಾಯಕಿಯ ಈ ಹೇಳಿಕೆಯು ಇವರ ಮನುವಾದಿ ಮನಸ್ಥಿತಿಯ ನೈಜ ಬಣ್ಣವನ್ನು ಬಯಲು ಮಾಡಿದೆ. ಜೊತೆಗೆ ಮೋದಿಯನ್ನು ಕೀಳು ಮಟ್ಟದಲ್ಲಿ ಬಿಂಬಿಸಿರುವುದರಿಂದ ಮೋದಿಯನ್ನೂ ಕೀಳಭಿರುಚಿಯ ದುರಾಚಾರಿ ಎಂದು ಸಾರಿದಂತಾಗಿದೆ. ತನ್ನ ಆಪ್ತೆಯ ಹೇಳಿಕೆಯ ಬಗ್ಗೆ ಸಂಸದೆ ಈ ಬಗ್ಗೆ ಮೌನ ವಹಿಸಿರುವುದು ಹೇಳಿಕೆಯನ್ನು ಸಮರ್ಥಿಸಿದಂತಾಗಿದೆ ಎಂದು ವಿಮ್ ಆರೋಪಿಸಿದೆ.

ಚುನಾವಣಾ ಪ್ರಚಾರಕ್ಕಾಗಿ, ಬಿಜೆಪಿಯ ಆಡಳಿತ ವೈಫಲ್ಯವನ್ನು ಮರೆಮಾಚಲು ಇವರು ಎಂತಹ ಕೀಳು ಮಟ್ಟಕ್ಕೂ ಇಳಿಯಬಲ್ಲರು ಎಂಬುವುದು ಇದರಿಂದ ಸಾಬೀತಾಗಿದೆ. ಈ ಘಟನೆಯು ಸಮಾಜದ ಸಾಮರಸ್ಯವನ್ನು ಕದಡಿ, ದ್ವೇಷವನ್ನು ಹರಡಿ ಆ ಮೂಲಕ ಮತಗಳ ಧ್ರುವೀಕರಿಸುವ ಷಡ್ಯಂತ್ರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಈ ಬಗ್ಗೆ ಪೊಲೀಸ್ ಇಲಾಖೆಯು ತಕ್ಷಣ ಕಾರ್ಯಪ್ರವೃತ್ತರಾಗಿ ಸಮಾಜದ ಶಾಂತಿಗೆ ಸಾಮಾಜಿಕ ಜಾಲತಾಣದ ಮೂಲಕ ಚ್ಯುತಿ ತರಲು ಪ್ರಯತ್ನಿಸಿರುವ ಸಂಸದೆಯ ಆಪ್ತೆಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News