ಉಡುಪಿ: ಮತದಾನ ಬಹಿಷ್ಕರಿಸದಂತೆ ಜಿಲ್ಲಾಧಿಕಾರಿ ಮನವಿ

Update: 2019-03-20 14:33 GMT

ಉಡುಪಿ, ಮಾ. 20: ಕುಡಿಯುವ ನೀರು ಹಾಗೂ ಮರಳು ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾಡಳಿತ ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದು, ಹೀಗಾಗಿ ಜಿಲ್ಲೆಯ ಜನತೆ ಮತದಾನ ಬಹಿಷ್ಕಾರದಂಥ ಕ್ರಮಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮನವಿ ಮಾಡಿದ್ದಾರೆ.

ಮಣಿಪಾಲದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸುಮಾರು 60ರಷ್ಟು ಗ್ರಾಪಂಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮರಳುಗಾರಿಕಾ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ತಾವು ಎದುರಿಸುತ್ತಿರುವ ಸಮಸ್ಯೆಗಳಿಂದ ಬೇಸತ್ತು ಈ ಬಾರಿ ಮತದಾನ ಬಹಿಷ್ಕರಿಸುವ ಬೆದರಿಕೆ ಹಾಕುತ್ತಿರುವ ಬಗ್ಗೆ ಗಮನ ಸೆಳೆದಾಗ ಈ ಮನವಿ ಮಾಡಿದರು.

ಮಣಿಪಾಲದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸುಮಾರು 60ರಷ್ಟು ಗ್ರಾಪಂಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮರಳುಗಾರಿಕಾ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ತಾವು ಎದುರಿಸುತ್ತಿರುವ ಸಮಸ್ಯೆಗಳಿಂದ ಬೇಸತ್ತು ಈ ಬಾರಿ ಮತದಾನ ಬಹಿಷ್ಕರಿಸುವ ಬೆದರಿಕೆ ಹಾಕುತ್ತಿರುವ ಬಗ್ಗೆ ಗಮನ ಸೆಳೆದಾಗ ಈ ಮನವಿ ಮಾಡಿದರು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಈಗಾಗಲೇ ತಹಶೀಲ್ದಾರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲೆಯ ನಾಲ್ಕು ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಉಳಿದ ಕೆಲವೆಡೆ ಸಾಧಾರಣ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿದೆ ಎಂದರು.

ಸ್ಥಳೀಯ ಮಟ್ಟದಲ್ಲೇ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಇಂಥ ಸಮಸ್ಯೆಗಳನ್ನು ಪರಿಹರಿಸುವಂತೆ ತಶೀಲ್ದಾರ್ ಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಇನ್ನು ಮರಳಿಗಾಗಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದು, ಜಿಲ್ಲೆಯಲ್ಲಿ ಮರಳು ತೆಗೆಯಲು ಕೈಗೊಂಡ ಕ್ರಮಗಳ ಕುರಿತು ಅವರಿಗೆ ವಿವರಿಸಿರುವುದಾಗಿ ಹೆಪ್ಸಿಬಾ ರಾಣಿ ತಿಳಿಸಿದರು.

ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಅತೀ ದೊಡ್ಡ ಸಂಭ್ರಮದ ಹಬ್ಬವಾಗಿದೆ. ದೇಶದ ಪ್ರತಿಯೊಬ್ಬ ಮತದಾರರು ಇದರಲ್ಲಿ ಭಾಗವಹಿಸಬೇಕಾಗಿದೆ. ಅದರಲ್ಲೂ ಉಡುಪಿ ಎಂಬುದು ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾಗುವ ಜಿಲ್ಲೆಗಳಲ್ಲೊಂದು ಎಂಬುದನ್ನು ಅವರಿಗೆ ಮನವರಿಕೆ ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಪಂಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡುವಂತೆ ತಹಶೀಲ್ದಾರ್‌ಗಳಿಗೆ ತಿಳಿಸಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿ, ಚುನಾವಣೆ ಬಹಿಷ್ಕರಿಸದಂತೆ ಜನರ ಮನ ಒಲಿಸುವಂತೆ ತಿಳಿಸಿರುವುದಾಗಿ ಹೆಪ್ಸಿಬಾ ರಾಣಿ ತಿಳಿಸಿದರು.

ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸ್ವರ್ಣ ನದಿಯಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಅವರ ಗಮನ ಸೆಳೆದಾಗ, ಇನ್ನೊಂದೆರಡು ದಿನದಲ್ಲಿ ನಗರಸಭೆಯ ಅಧಿಕಾರಿಗಳೊಂದಿಗೆ ಸಭೆ ಕರೆದು ಪರಿಸ್ಥಿತಿಯನ್ನು ಪರಿಶೀಲಿಸಿ ನೀರು ಸರಬರಾಜಿನಲ್ಲಿ ರೇಷನಿಂಗ್ ಜಾರಿಗೊಳಿಸುವ ಬಗ್ಗೆ ನಿರ್ಧರಿಸುವುದಾಗಿ ಹೇಳಿದರು.

ಮಳೆಗಾಲ ಪ್ರಾರಂಭಗೊಳ್ಳುವವರೆಗೆ ಈಗಿರುವ ನೀರನ್ನು ಮಿತವಾಗಿ ಬಳಸಬೇಕಾಗಿದೆ. ಹೀಗಾಗಿ ನಗರಕ್ಕೆ ಯಾವ ರೀತಿ ನೀರಿನ ಸರಬರಾಜು ಮಾಡಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದ ಅವರು ಸ್ವರ್ಣ ನದಿ ನೀರನ್ನು ಅಕ್ಕಪಕ್ಕದ ರೈತರಿಗೆ ನೀಡಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News