ಮಾ. 24ಕ್ಕೆ ಮೂಡುಬಿದಿರೆಯಲ್ಲಿ ಮ್ಯಾರಥಾನ್ ಸ್ಪರ್ಧೆ, ಸೌಹಾರ್ದ ನಡಿಗೆ

Update: 2019-03-20 15:08 GMT

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಜಾಗೃತಿ ಮೂಡಿಸಲು ಮೂಡುಬಿದಿರೆಯಲ್ಲಿ ಮಾ. 24ರಂದು ದ.ಕ ಜಿಲ್ಲಾ ಮಟ್ಟದ ಮ್ಯಾರಾಥಾನ್ ಸ್ಪರ್ಧೆ, ಹಿರಿಯ ನಾಗರಿಕರಿಗೆ ಸೌಹಾರ್ದ ನಡಿಗೆ ಆಯೋಜಿಸಲಾಗಿದೆ.

ಸುಮಾರು ಒಂದುವರೆ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಕೆ ಸವಿತಾ ಬುಧವಾರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

16 ವರ್ಷದ ಒಳಗಿನ ಬಾಲಕ, ಬಾಲಕಿಯರಿಗೆ ಸ್ವರಾಜ್ಯ ಮೈದಾನ ಬಳಿಯ ಮಾರಿಗುಡಿ ಎದುರಿನಿಂದ ಹೊರಡುವ ಸ್ಪರ್ಧೆ ಹನುಮಂತ ದೇವಸ್ಥಾನ ಎದುರಿನ ರಸ್ತೆಯಾಗಿ ಎಡಕ್ಕೆ ತಿರುಗಿ ಜೈನ್‌ಪೇಟೆ, ಅಲಂಗಾರು, ಕೊಡ್ಯಡ್ಕರಸ್ತೆಯಿಂದ ವರ್ತುಲ ರಸ್ತೆಯಾಗಿ ಸ್ವರಾಜ್ಯ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. 16 ವರ್ಷದ ಮೇಲ್ಪಟ್ಟ ಬಾಲಕ, ಬಾಲಕಿಯರಿಗೆ ಸ್ವರಾಜ್ಯ ಮೈದಾನದ ಮಾರಿಗುಡಿ ದೇವಸ್ಥಾನದ ಎದುರಿನಿಂದ ಮುಖ್ಯ ರಸ್ತೆ, ಹಳೆಪೊಲೀಸ್‌ಠಾಣೆ, ಜ್ಯೋತಿನಗರ, ಮಹಾವೀರಕಾಲೇಜು, ಕೊಡಂಗಲ್ಲು, ಕೋಟೆಬಾಗಿಲು, ಜೈನ್‌ಪೇಟೆ, ಅಲಂಗಾರು, ಕೊಡ್ಯಡ್ಕರಸ್ತೆ, ವರ್ತುಲ ರಸ್ತೆಯಾಗಿ ಸ್ವರಾಜ್ಯಮೈದಾನದಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ಹಿರಿಯ ನಾಗರಿಕರಿಗೆ ಮತದಾನದ ಕಡೆಗೆ ಸೌಹಾರ್ದ ನಡಿಗೆ ಎಂಬ ಕಾರ್ಯಕ್ರಮವನ್ನು ಮಾರಿಗುಡಿ ದೇವಸ್ಥಾನದ ಬಳಿಯಿಂದ ಮುಖ್ಯ ರಸ್ತೆಯಾಗಿ ಸಾವಿರಕಂಬದ ಬಸದಿವರೆಗೆ ನಡೆಯಲಿದೆ ಎಂದರು. ಮ್ಯಾರಥಾನ್ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ 50, ಸ್ವಿತೀಯ ರೂ 40, ತೃತೀಯ ರೂ 30 ಮತ್ತು ಚತುರ್ಥ ರೂ 20 ಸಾವಿರ ನಗದು ಬಹುಮಾನ ಪ್ರಕಟಿಸಲಾಗಿದೆ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಸಹಯೋಗದೊಂದಿಗೆ ಸ್ಪರ್ಧೆ ನಡೆಯಲಿದೆ ಎಂದರು.

ನೀತಿಸಂಹಿತೆ ಜಾರಿಗೆ ವಿಶೇಷ ತಂಡ:

ಚುನಾವಣೆ ಅಕ್ರಮಗಳ್ನು ತಡೆಯಲು ಹೆಜಮಾಡಿ, ಬೆಳುವಾಯಿ, ಗಂಟಾಲ್‌ಕಟ್ಟೆ ಮತ್ತು ಬಜಪೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. 9 ಪ್ಲೇಯಿಂಗ್ ಸ್ಕ್ವಾಡ್ ತಂಡ, 3 ವಿಡಿಯೋ ಸರ್ವೆಲೆನ್ಸ್ ತಂಡ, 6 ಮಂದಿ ಮಾಸ್ಟರ್ ಟ್ರೈನರ್ಸ್‌, ಸೆಕ್ಟರ್ ಆಫೀಸರ್ಸ್‌ ಹೀಗೆ ಚುನಾವಣೆ ಅಕ್ರಮ ತಡೆಯಲು ಮತ್ತು ಶಾಂತಿಯುತ ಮತದಾನಕ್ಕಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದರು.

ಖಾಸಗಿ ಕಾರ್ಯಕ್ರಮಗಳಿಗೆ ಅಡ್ಡಿ ಇಲ್ಲ:ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಮತದಾನದ ಮೇಲೆ ಪ್ರಭಾವ ಬೀರುವಂತ ಯಾವುದೇ ಘಟನೆಗಳು ನಡೆದಲ್ಲಿ ಕ್ರಮ ಕೈಗೊಳ್ಳಲಾಗುವುದು. ಮತದಾರರು ಯಾವುದೇ ಆತಂಕವಿಲ್ಲದೆ ಮತದಾನ ಮಾಡಬೇಕೆಂದು ಅವರು ವಿನಂತಿಸಿದರಲ್ಲದೆ ಚುನಾವನೆ ಅಕ್ರಮಗಳಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ನೀಡಬಹುದೆಂದು ಅವರು ತಿಳಿಸಿದರು.

ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜ, ಮೂಡುಬಿದಿರೆ ತಹಶಿಲ್ದಾರ್ ಸುದರ್ಶನ್ ಬಿ.ಕೆ, ಮುಲ್ಕಿ ತಹಶೀಲ್ದಾರ್ ಮಾಣಿಕ್ಯ, ಚುನಾವಣಾ ನೋಡೆಲ್ ಅಧಿಕಾರಿ ಶಿಲ್ಪಾ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಮೂಡುಬಿದಿರೆ ಎಸ್‌ಐ ಸಾವಿತ್ರಿ, ಮುಲ್ಕಿ ಎಸ್‌ಐ ಶೀತಲ್, ಬಜ್ಪೆ ಎಸ್‌ಐ ಪದ್ಮದೇವಳಿ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News