ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ವಗ್ಗ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರ !

Update: 2019-03-20 16:46 GMT

ಬಂಟ್ವಾಳ, ಮಾ. 20: ಗೇಟಿನ ಮುಂಭಾಗದಲ್ಲಿ ಸ್ವಾಗತದ ಬ್ಯಾನರ್, ಅದರ ಪಕ್ಕದಲ್ಲಿಯೇ ಸ್ವಾಗತ ಕೋರುವ ಕಮಾನು. ಶಾಮಿಯಾನ, ಬಣ್ಣ ಬಣ್ಣದ ಬಟ್ಟೆ, ಬಲೂನ್‍ಗಳಿಂದ ಸಿಂಗಾರಗೊಂಡಿರುವ ಶಾಲಾ ಮೈದಾನ...

ಇದು, ಯಾವುದೋ ಶಾಲಾ ಪ್ರತಿಭೋತ್ಸವ, ಕ್ರೀಡೋತ್ಸವ, ಪ್ರತಿಭಾ ಕಾರಂಜಿ, ಶಾಲಾ ವಾರ್ಷಿಕೋತ್ಸವದ ಚಿತ್ರಣವಲ್ಲ. ಬಂಟ್ವಾಳ ತಾಲೂಕಿನ ಕಾವಳಪಡೂರು-ವಗ್ಗ ಸರಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ಹೊರನೋಟವಿದು. ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಈ ಪರೀಕ್ಷಾ ಕೇಂದ್ರವು ಎಸೆಸೆಲ್ಸಿ ಪರೀಕ್ಷಾ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿದ್ದು, ಸಕಲ ತಯಾರಿಗಳನ್ನು ನಡೆಸಿದೆ.

ರಾಜ್ಯದಲ್ಲಿ ಮಾ.21ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕಾವಳಪಡೂರು ವಗ್ಗ ಸರಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ವಿನೂತನ ಪರಿಕಲ್ಪನೆಯು ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಬದುಕಿನ ಪ್ರಮುಖ ಪರೀಕ್ಷೆಯನ್ನು ಯಾವುದೇ ಆತಂಕ ಹಾಗೂ ಭಯವಿಲ್ಲದೆ ಸುಲಲಿತವಾಗಿ ಎದುರಿಸಬೇಕೆಂಬ ಉದ್ದೇಶದಿಂದ ಈ ರೀತಿಯ ವಿನೂತನ ಚಿಂತನೆ ಮಾಡಲಾಗಿದೆ ಎಂದು ಶೇಖ್ ಆದಂ ಸಾಹೇಬ್ ಅವರು ತಿಳಿಸಿದ್ದಾರೆ.

325 ಪರೀಕ್ಷಾರ್ಥಿಗಳು

ಇಲ್ಲಿನ ಪರೀಕ್ಷಾ ಕೇಂದ್ರಕ್ಕೆ ಸರಕಾರಿ ಪ್ರೌಢಶಾಲೆ ಸರಪಾಡಿ, ಕನ್ನಡ ಮಾಧ್ಯಮ ಪ್ರೌಢಶಾಲೆ ಅಲ್ಲಿಪಾದೆ, ಆಂಗ್ಲ ಮಾಧ್ಯಮ ಪ್ರೌಢಶಾಲೆ ಅಲ್ಲಿಪಾದೆ, ಸರಕಾರಿ ಪದವಿಪೂರ್ವ ಕಾಲೇಜು ಮಣಿನಾಲ್ಕೂರು, ಮೋರಾರ್ಜಿ ದೇಸಾಯಿ ವಗ್ಗ, ಸರಕಾರಿ ಪ್ರೌಢಶಾಲೆ ವಗ್ಗ, ಸರಕಾರಿ ಪ್ರೌಢ ಶಾಲೆ ಕಾವಳಕಟ್ಟೆ, ಪಂಚದುರ್ಗ ಪ್ರೌಢಶಾಲೆಯ ಕಕ್ಯಪದವು, ಹೀಗೆ ಸುತ್ತಮುತ್ತಲಿನ 8 ಶಾಲೆಗಳ 325 ವಿದ್ಯಾರ್ಥಿಗಳು 14 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ.

16 ಪರೀಕ್ಷಾ ಕೊಠಡಿಗಳಿಗೆ ಸಿ.ಸಿ.ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಬೇರೆ ಬೇರೆ ಶಾಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗಳ ಹುಡುಕಾಡಲು ಸಹಕಾರಿಗಳು ಸಹಾಯಕ ವಿದ್ಯಾರ್ಥಿಗಳನ್ನು ನೇಮಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳನ್ನು ವಿನೂತನ ರೀತಿಯಾಗಿ ಸ್ವಾಗತಿಸಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಶೇಖ್ ಆದಂ ಅವರು.

ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಿದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಸಂತಸ ಲವಲವಿಕೆಯಿಂದ ಸಾಧ್ಯವೆಂಬ ಚಿಂತನೆಯನ್ನು ಹೊಂದಿರುವ ಹಾಗೂ ದಾನಿಗಳ ಸಹಕಾರದೊಂದಿಗೆ ಇಂತಹ ವಿಭಿನ್ನ ಕಾರ್ಯಕ್ಕೆ ಮುಂದಾಗಿರುವ ಶಾಲಾ ಆಡಳಿತಕ್ಕೆ ಶಿಕ್ಷಣಾಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಯ ಬಗ್ಗೆ ಒಂದಿಷ್ಟು

2016ರ ಪರೀಕ್ಷೆಯಲ್ಲಿ ವಗ್ಗ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದ್ದು, 2018ರಲ್ಲಿ 95.67 ಶೇ. ಫಲಿತಾಂಶ ದಾಖಲಿಸುವ ತಾಲೂಕಿಗೆ ಕೀರ್ತಿ ತಂದಿದೆ. ಸ್ವಚ್ಛ ವಿದ್ಯಾಲಯ ಪ್ರಶಸ್ತಿ, ಪರಿಸರ ಮಿತ್ರ ಪ್ರಶಸ್ತಿ ಶಾಲೆಯ ಮುಡಿಗೆ ಮತ್ತೊಂದು ಗರಿ. ಅದಲ್ಲದೆ, ಶಾಲಾ ಮುಖ್ಯೋಪಾಧ್ಯಾಯ ಶೇಖ್ ಆದಂ ಸಾಹೇಬ್ ಅವರು ಜಿಲ್ಲಾ ಶಿಕ್ಷಕ ಪ್ರಶಸ್ತಿ, ಯೆನೆಪೋಯ ಶಿಕ್ಷಕ ಪ್ರಶಸ್ತಿಗೆ ಭಾಜರಾಗಿದ್ದಾರೆ.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ವಿಭಾಗ ಮಟ್ಟದ ನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿಸಲಾಗಿರುವ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಸೋಲಾರ್ ವ್ಯವಸ್ಥೆಯಿದ್ದು, ನುರಿತ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಹೊಂದಿದೆ. ಊರಿನ ದಾನಿಗಳ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಹಕಾರದಿಂದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ವಾರದ 2ದಿನ ಕ್ಯಾಂಟರಿಂಗ್ ಊಟ, ಉಳಿದ ದಿನಗಳಲ್ಲಿ ಶಾಲೆಯಲ್ಲಿಯೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಬೇಕು ಹಾಗೂ ಪರೀಕ್ಷಾ ಕೇಂದ್ರಗಳು ಮಗುಸ್ನೇಹಿಯಾಗಿರಬೇಕೆಂಬ ಉದ್ದೇಶದಿಂದ ಈ ರೀತಿಯಾಗಿ ಸಿಂಗಾರ ಮಾಡಲಾಗಿದೆ. ಅದಲ್ಲದೆ, ಕೊನೆಯ ಪರೀಕ್ಷೆಯಂದು ಸಿಹಿ-ತಿಂಡಿ ಹಂಚಿ ಸಂಭ್ರಮಿಸಲಾಗುವುದು.
-ಶೇಖ್ ಆದಂ ಸಾಹೇಬ್,
ಮುಖ್ಯೋಪಾಧ್ಯಾಯರು-ಸರಕಾರಿ ಪ್ರೌಢಶಾಲೆ ವಗ್ಗ

ಎಸೆಸೆಲ್ಸಿ ವಿದ್ಯಾರ್ಥಿಗಳು  ಆತಂಕದಿಂದ ಇರುತ್ತಾರೆ. ಪರೀಕ್ಷಾ ಕೇಂದ್ರಗಳಿಗೆ ಬೇರೆ, ಬೇರೆ ಶಾಲೆಗಳಿಂದ ಬರುವಂತಹ ವಿದ್ಯಾರ್ಥಿಗಳಲ್ಲಿ ಈ ಆತಂಕ ಇನ್ನೂ ಹೆಚ್ಚಿರುತ್ತದೆ. ಬದುಕಿನ ಪ್ರಮುಖ ಪರೀಕ್ಷೆಯಾದ ಎಸೆಸೆಲ್ಸಿಯನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಿದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಸಂತಸ, ಲವಲವಿಕೆಯಿಂದ ಬರೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ಕೊಠಡಿಯನ್ನು ನಿರ್ಮಿಸಿರುವ ಹಾಗೂ ವಿನೂತನ ಪ್ರಯತ್ನ ಮಾಡಿರುವ ವಗ್ಗ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದ ಅಧೀಕ್ಷರಿಕಗೂ ಎಲ್ಲ ಸಿಬ್ಬಂದಿಗೆ ಅಭಿನಂದನೆಗಳು. ಈ ಕಾರ್ಯ ಶ್ಲಾಘನೀಯ.
-ಅಬ್ದುಲ್ ರಝಾಕ್ ಅನಂತಾಡಿ, ಉಪನ್ಯಾಸಕರು
ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು

ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸುಗಮವಾಗಿ ನಡೆಯಲು ಸಕಲ ಸಿದ್ಧತೆ ಪೂರ್ಣವಾಗಿದೆ. ವಿನೂತನವಾಗಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಗಳು ತಯಾರಿ ನಡೆಸಿದೆ.
-ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ-ಬಂಟ್ವಾಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News