ದೂರಿಗೆ ಕಾಯದೆ ಸ್ವಯಂಪ್ರೇರಿತ ಕೇಸು ದಾಖಲಿಸಿ: ವೆಚ್ಚ ವೀಕ್ಷಕರ ಸೂಚನೆ

Update: 2019-03-20 16:00 GMT

ಉಡುಪಿ, ಮಾ.20: ಕೇಂದ್ರ ಚುನಾವಣಾ ಆಯೋಗದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಮಲ್ಲಿಕಾರ್ಜುನ ಉತ್ತರೆ ಅವರು ಬುಧವಾರ ಉಡುಪಿಗೆ ಆಗಮಿಸಿ ಚುನಾವಣಾ ಸಿದ್ಧತೆಗಳ ಪರಿಶೀಲನೆ ನಡೆಸಿದರು.

 ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಅಥವಾ ಯಾವುದೇ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿಗಾಗಿ ಕಾಯದೆ, ಚುನಾವಣಾ ಸಿಬ್ಬಂದಿಗಳು ತಮ್ಮ ಗಮನಕ್ಕೆ ಬಂದ ತಕ್ಷಣವೇ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ಕ್ರಮ ಕೈಗೊಳ್ಳಬೇು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಚುನಾವಣಾ ಪ್ರಚಾರದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು. ಪ್ರಮುಖವಾಗಿ ಮತದಾರರ ಮೇಲೆ ಪ್ರಬಾವ ಬೀರುವ ಚಟುವಟಿಕೆಗಳು ನಡೆಯದಂತೆ ಚುನಾವಣಾ ಕಾರ್ಯಗಳಿಗೆ ನಿಯೋಜಿತವಾದ ವಿವಿಧ ತಂಡಗಳು ಗಮನಹರಿಸಬೇಕು’ ಎಂದು ಅವರು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎರಡು ಜಿಲ್ಲೆಗಳಲ್ಲಿ ಹರಡಿ ಕೊಂಡಿರುವುದರಿಂದ ಎರಡೂ ಜಿಲ್ಲೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆ ಯಿಂದ ಕಾರ್ಯನಿರ್ವಹಿಸಬೇಕು. ಹಣ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಮಾಹಿತಿಯನ್ನು ಪರಸ್ಪರರು ಹಂಚಿಕೊಂಡು ಅವುಗಳನ್ನು ತಡೆಗಟ್ಟಬೇಕು. ದಿನದ 24 ಗಂಟೆಗಳ ಕಾಲವೂ ಈ ವಿಷಯದಲ್ಲಿ ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ನಿಗಾ ಇಡಲು ವೆಚ್ಚ ವೀಕ್ಷಕರು ಸೂಚಿಸಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವೆಚ್ಚ ವೀಕ್ಷಕರಿಗೆ ಲೋಕಸಭಾ ಕ್ಷೇತ್ರದ ಮಾಹಿತಿಗಳನ್ನು ನೀಡಿ, ಕ್ಷೇತ್ರದ ಎಲ್ಲಾ 1837 ಮತಗಟ್ಟೆಗಳಲ್ಲೂ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಸಿದ್ಧತೆಳನ್ನು ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಚುನಾವಣಾ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಬಳಿಕ ವೆಚ್ಚ ವೀಕ್ಷಕರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಮಾಧ್ಯಮ ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಕೇಂದ್ರ, ಸಿ-ವಿಜಿಲ್ ದೂರು ಕೋಶ, ಕಂಟ್ರೋಲ್ ರೂಂ ಮತ್ತಿತರ ಕಡೆ ಭೇಟಿ ನೀಡಿ ಅಲ್ಲಿನ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News