ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು

Update: 2019-03-20 16:30 GMT

ಮಂಗಳೂರು, ಮಾ.20: ಸೇವೆಯಲ್ಲಿ ದುರ್ನಡತೆ ತೋರಿದ ಕಾರಣಕ್ಕೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಭಾರ ವಿಭಾಗೀಯ ನಿಯಂತ್ರಣಾಧಿಕಾರಿಯನ್ನಾಗಿ ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್ ಅವರನ್ನು ನೇಮಕಗೊಳಿಸಲಾಗಿದೆ.

ಯಶವಂತ ಕುಮಾರ್ ಅವರು ಇತ್ತೀಚೆಗಷ್ಟೆ ಹಾಸನದಿಂದ ಮಂಗಳೂರಿಗೆ ವರ್ಗಾವಣೆಯಾಗಿ ಆಗಮಿಸಿದ್ದರು. ಆದರೂ ಹಾಸನದಿಂದ ಕಡತಗಳನ್ನು ತರಿಸಿಕೊಂಡು ವಿಲೇವಾರಿ ನಡೆಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಅಮಾನತು ನಡೆದಿದೆ.

ಇತ್ತೀಚೆಗೆ ಬೆಂಗಳೂರು ಕೇಂದ್ರ ಕಚೇರಿಯ ವಿಜಿಲೆನ್ಸ್ ತಂಡ ಮಂಗಳೂರಿನ ಕಚೇರಿಗೆ ದಾಳಿ ನಡೆಸಿ ಹಾಸನದ ಕಡತಗಳನ್ನು ವಶಪಡಿಸಿಕೊಂಡಿತ್ತು. ತನಿಖೆ ನಡೆಸಿದಾಗ ಯಶವಂತ ಕುಮಾರ್ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಅದರ ವರದಿಯನ್ನು ಕೆಎಸ್ಸಾರ್ಟಿಸಿ ಎಂಡಿಗೆ ರವಾನಿಸಲಾಗಿತ್ತು. ಇದರ ಆಧಾರದಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ಯಶವಂತ ಕುಮಾರ್‌ಗೆ ಸಹಕರಿಸುತ್ತಿದ್ದ ಹಾಸನದ ಕೆಎಸ್ಸಾರ್ಟಿಸಿ ಆಡಳಿತಾಧಿಕಾರಿ ಲೋಕೇಶ್ ಅವರನ್ನೂ ಅಮಾನತುಗೊಳಿಸಲಾಗಿದೆ.

ಯಶವಂತ ಕುಮಾರ್ ಈಗ ಅಮಾನತಾಗಿರುವುದು ಮೂರನೇ ಬಾರಿ. ಹಿಂದೆ ಪುತ್ತೂರಿನಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದಾಗ ಹಣಕಾಸು ವಿಚಾರದಲ್ಲಿ ಅಮಾನತಾಗಿದ್ದರು. ಬಳಿಕ ಚಿಕ್ಕಮಗಳೂರಿನಲ್ಲೂ ಒಮ್ಮೆ ಅಮಾನತಾಗಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News