ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಸ್ಪರ್ಧೆಗೆ ಪಕ್ಷದಿಂದ ತಣ್ಣೀರು

Update: 2019-03-20 17:54 GMT

ಉಡುಪಿ, ಮಾ. 20: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕರ್ನಾಟಕದ 20 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಮಾ. 22ರ ಶುಕ್ರವಾರ ಹೊಸದಿಲ್ಲಿಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.

ಈ ನಡುವೆ ಬುಧವಾರ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಮಾತುಕತೆಗೆ ಬೆಂಗಳೂರಿಗೆ ಕರೆಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ನಾಯಕರು, ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಾಕಣದಲ್ಲಿರುವ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಸರಕಾರ ಆಡಳಿತದಲ್ಲಿದೆ. ಲೋಕಸಭಾ ಚುನಾವಣೆಯಲ್ಲೂ ಒಟ್ಟಾಗಿ ಸ್ಪರ್ಧಿಸಲು ಎರಡೂ ಪಕ್ಷಗಳು ನಿರ್ಧರಿಸಿವೆ. ಅದರಂತೆ 20 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಎಂಟರಲ್ಲಿ ಜೆಡಿಎಸ್ ಸ್ಪರ್ಧಿಸಲು ಒಪ್ಪಂದವಾಗಿದೆ. ಮೈತ್ರಿ ಧರ್ಮವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದ್ದು, ಅದರಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಜೆಡಿಎಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಅವರಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು. ಅವರ ಪರವಾಗಿ ಪ್ರಚಾರ ನಡೆಸಿ ಗೆಲುವು ತಂದುಕೊಡಲು ಪ್ರಯತ್ನಿಸಬೇಕು ಎಂದು ರಾಜ್ಯ ನಾಯಕರು ಜಿಲ್ಲಾ ನಾಯಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ. ವಿಜಯ ಕುಮಾರ್, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಯು.ಆರ್. ಸಭಾಪತಿ, ಎಂ.ಎ. ಗಫೂರ್, ಬಿ.ಎಲ್.ಶಂಕರ್, ಜಿ.ಎ. ಬಾವಾ ಮುಂತಾದವರು ಭಾಗವಹಿಸಿದ್ದರು.

ಪ್ರಮೋದ್ ಆಸೆಗೆ ತಣ್ಣೀರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟದಲ್ಲಿರುವ ಜೆಡಿಎಸ್ ಪರವಾಗಿ ತಾನು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದ ಪ್ರಮೋದ್ ಮಧ್ವರಾಜ್ ಅವರ ಆಸೆಗೆ ರಾಜ್ಯ ನಾಯಕರು ತಣ್ಣೀರೆರಚಿದ್ದಾರೆ ಎಂದು ತಿಳಿದುಬಂದಿದೆ.

‘ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಚಿಹ್ನೆ ಹಾಗೂ ಜೆಡಿಎಸ್ ಬಿಫಾರ್ಮ್ ನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಜೆಡಿಎಸ್‌ನ ಬಿಫಾರ್ಮ್‌ನಲ್ಲಿ ಸ್ಪರ್ಧಿಸಿದ ಬಳಿಕ ನೀವು ಆ ಪಕ್ಷದ ಸದಸ್ಯರಾಗಿಯೇ ಪರಿಗಣಿಸಲ್ಪಡುತ್ತೀರಿ. ಹೀಗಾಗಿ ಸ್ಪರ್ಧಿಸಬೇಕೆಂದಿದ್ದರೆ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿಯೇ ಸ್ಪರ್ಧಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ, ಪ್ರಮೋದ್‌ಗೆ ಮನದಟ್ಟು ಮಾಡಿದರೆಂದು ಮೂಲಗಳು ತಿಳಿಸಿವೆ.

ಮತ್ತೊಂದು ಕಡೆ ಜೆಡಿಎಸ್‌ಗೂ ಸಮರ್ಥ ಅಭ್ಯರ್ಥಿಯ ಹುಡುಕಾಟ ಕಗ್ಗಂಟಾಗಿದೆ. ಅವರ ಆಯ್ಕೆ ಅವಕಾಶವೂ ಸೀಮಿತವಾಗಿದೆ. ಹೀಗಾಗಿ ಪಕ್ಷ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದನ್ನು ಅದು ಎದುರು ನೋಡುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಉಡುಪಿಯಿಂದ ಶೋಭಾ ಕರಂದ್ಲಾಜೆಗೆ ಮತ್ತೆ ಟಿಕೇಟ್ ಸಿಕ್ಕಿದರೆ, ಅಥವಾ ಜಯಪ್ರಕಾಶ್ ಹೆಗ್ಡೆ ಬಿಟ್ಟು ಬೇರೆ ಅಭ್ಯರ್ಥಿಗೆ ಮಣೆ ಹಾಕಿದರೆ, ಜಯಪ್ರಕಾಶ್ ಹೆಗ್ಡೆಯವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿ ನಿಲ್ಲಿಸುವ ಯೋಜನೆಯೊಂದಿಗೆ ದೇವೇಗೌಡರು ಕಾಯುತಿದ್ದಾರೆ ಎಂದು ಮೂಲ ತಿಳಿಸಿದೆ.

ಕಾಂಗ್ರೆಸ್‌ನಿಂದ ಯಾರೇ ಆಕಾಂಕ್ಷಿಗಳು ಬಂದರೂ ಅವರು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಬೇಕೆಂಬುದು ದೇವೇಗೌಡರ ಶರತ್ತು. ಇದರಿಂದಾಗಿಯೇ ಅವರು ಚಿಕ್ಕಮಗಳೂರಿನ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಆರತಿ ಕೃಷ್ಣರನ್ನು ಸಂಪರ್ಕಿಸಿದರೂ ಅವರು ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಬಿಲ್‌ಕುಲ್ ಒಪ್ಪಲಿಲ್ಲ. ಅನಂತರ ಪ್ರಮೋದ್ ಮಧ್ವರಾಜ್‌ಗೂ ಅವರು ಇದೇ ಶರತ್ತನ್ನು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಒಂದಲ್ಲ ಒಂದು ಸಮಸ್ಯೆ ಕಾಡುತ್ತಿವೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News