ಚುನಾವಣಾ ಪ್ರಚಾರಕ್ಕೆ ಪ್ರಾರ್ಥನಾ ಸ್ಥಳಗಳನ್ನು ಬಳಸಬೇಡಿ: ಚುನಾವಣಾ ಆಯೋಗ

Update: 2019-03-20 18:03 GMT

 ಹೊಸದಿಲ್ಲಿ, ಮಾ. 20: ಲೋಕಸಭಾ ಚುನಾವಣೆಯ ಸಂದರ್ಭ ಪ್ರಚಾರಕ್ಕೆ ಪ್ರಾರ್ಥನಾ ಸ್ಥಳಗಳನ್ನು ಬಳಸದಂತೆ ಹಾಗೂ ವಿವಿಧ ಜಾತಿ, ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳದಂತೆ ರಾಜಕೀಯ ಪಕ್ಷಗಳು ಹಾಗೂ ಧಾರ್ಮಿಕ ಮುಖಂಡರಿಗೆ ಚುನಾವಣಾ ಆಯೋಗ ಮಂಗಳವಾರ ನಿರ್ದೇಶಿಸಿದೆ.

 ಚುನಾವಣೆ ಸಂದರ್ಭ ಮತದಾರರನ್ನು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣಗೊಳಿಸುವ ಪ್ರಯತ್ನ ತಡೆಯಲು ಮಸೀದಿಗಳಿಗೆ ವಿಶೇಷ ಮೇಲ್ವಿಚಾರಕರನ್ನು ನಿಯೋಜಿಸಬೇಕು ಎಂದು ಬಿಜೆಪಿ ಮನವಿ ಮಾಡಿದ ದಿನದ ಬಳಿಕ ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ.

ಚುನಾವಣಾ ನೀತಿ ಸಂಹಿತೆ ಪ್ರಕಾರ ಚುನಾವಣಾ ಪ್ರಚಾರದ ಸಂದರ್ಭ ಜಾತಿ, ಧರ್ಮವನ್ನು ಬಳಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ ಎಂದು ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ನೀಡಿದ ಹೇಳಿಕೆ ತಿಳಿಸಿದೆ.

 ವಿವಿಧ ಜಾತಿ, ಸಮುದಾಯ, ಧರ್ಮ ಅಥವಾ ಭಾಷೆಗಳ ನಡುವೆ ಉದ್ವಿಗ್ನತ ಸೃಷ್ಟಿಸುವ ಹಾಗೂ ಅಸ್ತಿತ್ವದಲ್ಲಿರುವ ಭಿನ್ನತೆಯನ್ನು ಉಲ್ಬಣಗೊಳಿಸುವ ಯಾವುದೇ ಚಟುವಟಿಕೆಯಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಅಥವಾ ಯಾವುದೇ ವ್ಯಕ್ತಿ ತೊಡಗಿಕೊಳ್ಳಲು ಅವಕಾಶ ಇಲ್ಲ ಎಂದು ಹೇಳಿಕೆ ತಿಳಿಸಿದೆ.

 ಚುನಾವಣಾ ಪ್ರಚಾರದ ಸಂದರ್ಭ ಶಬರಿಮಲೆ ದೇವಾಲಯ ವಿವಾದವನ್ನು ಬಳಸಿಕೊಳ್ಳದಂತೆ ಕೇರಳದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಮಾರ್ಚ್ 11ರಂದು ಎಚ್ಚರಿಕೆ ನೀಡಿತ್ತು. ಚುನಾವಣಾ ಪ್ರಚಾರದಲ್ಲಿ ಈ ವಿವಾದವನ್ನು ಬಳಸಿಕೊಳ್ಳುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಅದು ಹೇಳಿತ್ತು.

7 ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಎಪ್ರಿಲ್ 11ರಿಂದ ಆರಂಭಗೊಳ್ಳಲಿದೆ ಹಾಗೂ ಮೇ 19ರ ವರೆಗೆ ಮುಂದುವರಿಯಲಿದೆ. ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮಾರ್ಚ್ 10ರಿಂದ ಚುನಾವಣಾ ನೀತಿ ಸಂಹಿತೆ ಅಸ್ತಿತ್ವಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News