ದ.ಕ. ಲೋಕಸಭಾ ಕ್ಷೇತ್ರ: ಬಿಜೆಪಿಯಿಂದ ಮೂರನೇ ಬಾರಿಗೆ ನಳಿನ್ ಕಣಕ್ಕೆ

Update: 2019-03-21 15:31 GMT

ಮಂಗಳೂರು, ಮಾ. 21: ಎಪ್ರಿಲ್ 18ರಂದು ನಡೆಯುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಕೊನೆಗೂ ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದೆ.

2009 ಮತ್ತು 2014ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ನಳಿನ್ ಕುಮಾರ್ ಕಟೀಲ್‌ಗೆ ಮೂರನೇ ಬಾರಿಗೆ ಸ್ಪರ್ಧಿಸಲು ಬಿಜೆಪಿಯೊಳಗೇ ವಿರೋಧವಿತ್ತು. ಜಾತಿ ಬಲವನ್ನು ಮುಂದಿಟ್ಟುಕೊಂಡು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದ ಸಂಘ ಪರಿವಾರದ ಮುಖಂಡ ಸತ್ಯಜಿತ್ ಸುರತ್ಕಲ್ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು.

ಈ ಮಧ್ಯೆ ಶಾಸಕರೂ ಆಗಿರುವ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರು ದ.ಕ. ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೂ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದರು. ಆದರೆ, ಜಾತಿ ರಾಜಕೀಯ ಲಾಬಿಯು ಬಿರುಸಿನಿಂದ ಕೂಡಿದ್ದ ಕಾರಣ ಪಕ್ಷದ ಹೈಕಮಾಂಡ್ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲು ವಿಳಂಬಿಸಿತ್ತು. ಇತ್ತೀಚೆಗಷ್ಟೇ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರರೊಬ್ಬರು ಅಭ್ಯರ್ಥಿ ಯಾರು ಎಂಬುದು ತೀರ್ಮಾನವಾಗಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವುದೊಂದೇ ನಮ್ಮ ಗುರಿ ಎಂದಿದ್ದರು. ಇದೀಗ ಹೈಕಮಾಂಡ್ ಸಾಕಷ್ಟು ವಿರೋಧದ ಮಧ್ಯೆಯೂ ನಳಿನ್ ಕುಮಾರ್ ಕಟೀಲ್‌ಗೆ ಮಣೆ ಹಾಕಿದೆ.

2009ರಲ್ಲಿ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್‌ನ ಜನಾರ್ದನ ಪೂಜಾರಿಯ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರೆ, 2014ರಲ್ಲಿ ಪೂಜಾರಿ ವಿರುದ್ಧ 1.43 ಲಕ್ಷ ಮತಗಳ ಅಂತರದಿಂದ ಗೆದ್ದು ಗಮನ ಸೆಳೆದಿದ್ದರು. ದಕ್ಷಿಣ ಕನ್ನಡದ ಹಿನ್ನೆಡೆಗೆ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂದು ಚುನಾವಣಾ ಪೂರ್ವದಲ್ಲಿ ಬಲವಾಗಿ ಆರೋಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ನಳಿನ್ ವಿರುದ್ಧ ಯಾರನ್ನು ಬಳಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News