ಎಸೆಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 392 ವಿದ್ಯಾರ್ಥಿಗಳು ಗೈರು

Update: 2019-03-21 16:34 GMT

ಮಂಗಳೂರು, ಮಾ.21: ದ.ಕ.ಜಿಲ್ಲೆಯಲ್ಲಿ ಗುರುವಾರದಿಂದ ಆರಂಭಗೊಂಡ ಎಸೆಸೆಲ್ಸಿ ಪರೀಕ್ಷೆಗೆ 392 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಗುರುವಾರ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿದ್ದ 29,097 ವಿದ್ಯಾರ್ಥಿಗಳ ಪೈಕಿ 28,705 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾದ ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನವೇ 392 ಮಂದಿ ಗೈರು ಹಾಜರಾಗಿರುವುದು ಗಮನಾರ್ಹವಾಗಿದೆ. ದ.ಕ. ಜಿಲ್ಲೆಯ 95 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆದಿದ್ದು, ಯಾವುದೇ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಮೊದಲ ದಿನ ನಡೆದ ಪರೀಕ್ಷೆಗೆ ಹಾಜರಾದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸುಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಕೆಲವು ಕಡೆ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸಲು ಸ್ವಾಗತ ಫಲಕ, ಬ್ಯಾನರ್ ಅಳವಡಿಕೆ, ಚೆಂಡೆ-ವಾದ್ಯ, ಗುಲಾಬಿ ಹೂ, ಶಿಕ್ಷಕ ವರ್ಗದಿಂದ ಮುಗುಳ್ನಗೆ ಇತ್ಯಾದಿ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಹಬ್ಬದ ವಾತಾವರಣವನ್ನೇ ಮಾಡಲಾಗಿತ್ತು. ಜೊತೆಗೆ ಪಾನೀಯ, ಫಲಾಹಾರದ ವ್ಯವಸ್ಥೆಯನ್ನೂ ಖಾಸಗಿಯಾಗಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News