ಸಂತ ಆ್ಯಗ್ನೆಸ್ ಕಾಲೇಜಿನಲ್ಲಿ ವಿಚಾರ ಸಂಕಿರಣಕ್ಕೆ ಚಾಲನೆ

Update: 2019-03-21 16:37 GMT

ಮಂಗಳೂರು, ಮಾ.21: ನಗರದ ಬೆಂದೂರ್‌ವೆಲ್ ಸಂತ ಆ್ಯಗ್ನೆಸ್ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ನಾತಕೋತ್ತರ ಕ್ಲಿನಿಕಲ್ ಸೈಕಲಾಜಿ ವಿಭಾಗದ ವತಿಯಿಂದ ‘ಮಹಿಳೆಯರ ವೃತ್ತಿ ಬದುಕಿನ ಮೇಲೆ ಲಿಂಗ ಪೂರ್ವಾಗ್ರಹದ ಪ್ರಭಾವ ಮತ್ತು ಪರಿಣಾಮ’ ವಿಷಯದ ಕುರಿತ ಎರಡು ದಿನಗಳ ವಿಚಾರ ಸಂಕಿರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮಹಿಳೆ ತನ್ನತನವನ್ನು ಬಿಟ್ಟುಕೊಡದೆ ಯಶಸ್ಸಿನತ್ತ ಪಯಣ ಬೆಳೆಸಬೇಕು. ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬೇಕು. ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಮುಂದಿದ್ದಾಳೆ. ಆದರೂ ಕೆಲವೊಂದು ಪರಿಧಿಗಳು ಇನ್ನೂ ಮಹಿಳೆಯರ ಸುತ್ತ ಸುತ್ತುತ್ತಿದೆ. ಎಲ್ಲಿಯವರೆಗೆ ಮಹಿಳೆಯರ ಏಳಿಗೆಯ ಬಗ್ಗೆ ಸ್ವತಃ ಮಹಿಳೆಯರೇ ಯೋಚಿಸುವುದಿಲ್ಲವೋ, ಅಲ್ಲಿಯವರೆಗೆ ಸಮಾಜದ ಏಳಿಗೆ ಆಗುವುದಿಲ್ಲ ಎಂದರು.

ಮಹಿಳೆಯು ಹೂವಿನಂತೆ ಮೃದುವಾಗಿರಲು, ವಜ್ರದಂತೆ ಕಠಿನವಾಗಿರಲು ಸಾಧ್ಯವಿದೆ. ಸುಪ್ತವಾಗಿರುವ ಶಕ್ತಿಯನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರತಿ ಮಹಿಳೆ ಮುಂದಾಗಬೇಕು ಎಂದು ಶ್ಯಾಮಲಾ ಎಸ್. ಕುಂದರ್ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಮಾತನಾಡಿ ಮಹಿಳೆ ಶ್ರಮಜೀವಿಯಾದರೂ ಕೂಡ ಆಕೆಯ ಶ್ರಮಕ್ಕೆ ತಕ್ಕ ಪ್ರತಿಲ ಸಿಗುತ್ತಿಲ್ಲ. ಕೆಲಸದ ಸ್ಥಳದಲ್ಲಿ ಪುರುಷರಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರ ಸಂಬಳ,ಬಡ್ತಿ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತದೆ. ಕೆಲಸದ ವಿಚಾರದಲ್ಲಿಯೂ ದೌರ್ಜನ್ಯಗಳನ್ನು ಸಹಿಸಿಕೊಂಡು ಆಕೆ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಎಂ. ಜೆಸ್ವಿನಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಸಿ. ಡಾ. ವಿನೋರಾ, ವಿದ್ಯಾರ್ಥಿ ಪ್ರತಿನಿಧಿ ಪೂಜಾ ಗಂಗಾಧರ್ ಉಪಸ್ಥಿತರಿದ್ದರು. ಮೆಡಿಕಲ್ ಸೈಕಾಲಜಿ ವಿಭಾಗ ಮುಖ್ಯಸ್ಥೆ ಡಾ. ಕಾವ್ಯಾಶ್ರೀ ಕೆ. ಬಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News