ಉದ್ವಿಗ್ನತೆಯನ್ನು ಭಾರತ-ಪಾಕ್ ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲಿ

Update: 2019-03-21 16:58 GMT

 ಬೀಜಿಂಗ್, ಮಾ. 21: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಉಂಟಾಗಿರುವ ಉದ್ವಿಗ್ನತೆಗಳನ್ನು ಭಾರತ ಮತ್ತು ಪಾಕಿಸ್ತಾನಗಳು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಮುಂದಾಳುತ್ವದ ಪ್ರಾದೇಶಿಕ ಗುಂಪು ‘ಶಾಂಘೈ ಸಹಕಾರ ಸಂಘಟನೆ’ ಹೇಳಿದೆ.

   ಈ ದೇಶಗಳು ತಮ್ಮ ನಡುವಿನ ವೈರತ್ವವನ್ನು ಗುಂಪಿಗೆ ತರಬಾರದು ಎಂದು ಅದು ಸೂಚಿಸಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಬದ್ಧವಾಗಿರಬೇಕು ಎಂಬುದಾಗಿಯೂ ಸಂಘಟನೆಯ ಹೊಸದಾಗಿ ನೇಮಕಗೊಂಡಿರುವ ಮಹಾಕಾರ್ಯದರ್ಶಿ ವ್ಲಾದಿಮಿರ್ ನೊರೊವ್ ಹೇಳಿದ್ದಾರೆ.

 ‘‘ಇಲ್ಲದಿದ್ದರೆ, ಶಾಂಘೈ ಸಹಕಾರ ಸಂಘಟನೆಯಲ್ಲಿ ಪಾಲ್ಗೊಳ್ಳಲು ಉಭಯ ದೇಶಗಳಿಗೆ ಅವಕಾಶವಿಲ್ಲ’’ ಎಂದರು.

ಸಂಯಮ ಕಾಯ್ದುಕೊಳ್ಳಬೇಕು ಹಾಗೂ ದ್ವಿಪಕ್ಷೀಯ ಸಂಘರ್ಷಗಳಿಗೆ ರಾಜಕೀಯ ಮತ್ತು ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬುದಾಗಿ ಸಂಘಟನೆಯ ಎಲ್ಲ ಸದಸ್ಯ ದೇಶಗಳು ನೀಡಿರುವ ಕರೆಗಳಿಗೆ ಭಾರತ ಮತ್ತು ಪಾಕಿಸ್ತಾನಗಳು ಸ್ಪಂದಿಸಿರುವುದರಿಂದ ಸದಸ್ಯ ದೇಶಗಳು ಸಂತುಷ್ಟಗೊಂಡಿವೆ ಎಂದು ನೊರೊವ್ ನುಡಿದರು.

‘‘ಉದ್ವಿಗ್ನತೆ ಹೆಚ್ಚಲು ಅವಕಾಶ ನೀಡುವುದಿಲ್ಲ ಹಾಗೂ ಸಂಘಟನೆಯ ತತ್ವಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹಾಗೂ ಅನುಸರಿಸಲು ಸಿದ್ಧರಿದ್ದೇವೆ ಎಂಬ ಸ್ಪಷ್ಟ ಸಂದೇಶಗಳನ್ನು ಈ ಎರಡು ದೇಶಗಳಿಂದ ಇಡೀ ಜಗತ್ತು ಕೇಳಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News