ಉದ್ಯೋಗ ಸೃಷ್ಟಿಗೆ ವಿಫಲ: ಬಿಜೆಪಿ ವಿರುದ್ಧ 50 ನಗರಗಳಲ್ಲಿ ಪ್ರಚಾರ ನಡೆಸಲು 70 ಸಂಘಟನೆಗಳ ನಿರ್ಧಾರ

Update: 2019-03-21 17:00 GMT

ಹೊಸದಿಲ್ಲಿ, ಮಾ.21: ಉದ್ಯೋಗ ಸೃಷ್ಟಿಸುವಲ್ಲಿ ನರೇಂದ್ರ ಮೋದಿ ಸರಕಾರದ ವೈಫಲ್ಯದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ದೇಶದಾದ್ಯಂತ 70 ಸಂಘಟನೆಗಳು ಒಗ್ಗೂಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಲು ನಿರ್ಧರಿಸಿವೆ ಎಂದು ಸಂಘಟನೆಯ ಮುಖಂಡರು ಸೋಮವಾರ ತಿಳಿಸಿದ್ದಾರೆ.

ಬಹುತೇಕ ಎಡಪಕ್ಷಗಳ ಬೆಂಬಲಿತ ಸಂಘಟನೆಗಳ ವೇದಿಕೆಯಾಗಿರುವ ‘ಯಂಗ್ ಇಂಡಿಯಾ ನ್ಯಾಷನಲ್ ಕಾರ್ಡಿನೇಷನ್ ಕಮಿಟಿ’ (ವೈಐಎನ್‌ಸಿಸಿ)ಯು ಉತ್ತರಪ್ರದೇಶದ ಬದೌನ್‌ನಿಂದ ಎಪ್ರಿಲ್ ಮೊದಲ ವಾರದಲ್ಲಿ ಈ ಅಭಿಯಾನವನ್ನು ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಫೆಬ್ರವರಿ 7ರಂದು ಸರಕಾರದ ವಿರುದ್ಧ ವೈಐಎನ್‌ಸಿಸಿ ರ್ಯಾಲಿಯನ್ನು ಆಯೋಜಿಸಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಯುವಜನತೆ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗದ ಕುರಿತು ಸರಕಾರ ನೀಡಿದ್ದ ಭರವಸೆ ಈಡೇರದ ಬಗ್ಗೆ ಸರಕಾರವನ್ನು ಪ್ರಶ್ನಿಸಿದ್ದರು.

ಇದೀಗ ಲೋಕಸಭಾ ಚುನಾವಣೆಯಲ್ಲೂ ಈ ವಿಷಯವನ್ನು ಮುಂದಿಟ್ಟುಕೊಂಡು ಮೋದಿ ವಿರುದ್ಧ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ವಿದ್ಯಾರ್ಥಿಗಳ ಸಂಘಟನೆ ‘ಎಐಎಸ್‌ಎ’ದ ಸದಸ್ಯ ಎನ್ ಸಾಯಿಬಾಲಾಜಿ ಹೇಳಿದ್ದಾರೆ. 2016ರ ಅಕ್ಟೋಬರ್‌ನಿಂದ ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಹುಟ್ಟೂರು ಬದೌನ್‌ನಿಂದ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಸರಕಾರ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ 2 ಸಾವಿರ ಉದ್ಯೋಗವನ್ನೂ ಅವರು ನೀಡಿಲ್ಲ. ಆದ್ದರಿಂದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳವು ಮುಂಬರುವ ಚುನಾವಣೆಯಲ್ಲಿ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ಜನತೆಯನ್ನು ಒತ್ತಾಯಿಸಲಿದೆ ಎಂದು ಸಮಾಜವಾದಿ ಯುವಜನ ಸಭಾದ ನಿಸಾರ್ ಅಹ್ಮದ್ ಹೇಳಿದ್ದಾರೆ.

ಅಲಹಾಬಾದ್‌ನಲ್ಲಿ ಸ್ವಚ್ಛತಾ ಕಾರ್ಮಿಕರ ಪಾದ ತೊಳೆಯುವ ಮೂಲಕ ಮೋದಿ ನಾಟಕವಾಡಿದ್ದಾರೆ. ಅವರಿಗೆ ಸ್ವಚ್ಛತಾ ಕಾರ್ಮಿಕರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅವರಿಗೆ ಉದ್ಯೋಗ ಸೃಷ್ಟಿಸಲಿ ಎಂದು ‘ಆಲ್ ಇಂಡಿಯಾ ರೈಲ್ವೇ ಅಪ್ರೆಂಟಿಸಸ್’ನ ಮುಖಂಡ ಆಶಿಷ್ ಹೇಳಿದ್ದಾರೆ. ಸರಕಾರ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಸರಕಾರಿ ಆಸ್ಪತ್ರೆಗಳ ಕರುಣಾಜನಕ ಪರಿಸ್ಥಿತಿಯಿಂದಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ತಾವು ದ್ವಿತೀಯ ದರ್ಜೆಯ ಪ್ರಜೆಗಳೆಂದು ಬಡಜನರು ಭಾವಿಸುವಂತೆ ಸರಕಾರ ಮಾಡಿದೆ ಎಂದು ಎಐಐಎಂಎಸ್‌ನ ನಿವಾಸಿ ವೈದ್ಯರ ಸಂಘದ ಮಾಜಿ ಅಧ್ಯಕ್ಷ ಹರ್ಜಿತ್ ಸಿಂಗ್ ಭಟ್ಟಿ ಹೇಳಿದ್ದಾರೆ.

ತಾನು ಮೋದಿಯನ್ನು ವಿರೋಧಿಸುತ್ತಿಲ್ಲ. ಆದರೆ ಈಗಿನ ಸರಕಾರ ಆರೆಸ್ಸೆಸ್ ಸಿದ್ಧಾಂತದಂತೆ ಕಾರ್ಯ ನಿರ್ವಹಿಸುವುದನ್ನು ವಿರೋಧಿಸುತ್ತೇನೆ ಎಂದು ಎಸ್‌ಎಫ್‌ಐ ನಾಯಕಿ ದೀಪ್ಷಿತಾ ದತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News