ಭಾರತದ ಮೇಲೆ ಇನ್ನೊಂದು ಉಗ್ರ ದಾಳಿ, ಪಾಕ್‌ಗೆ ‘ಅತ್ಯಂತ ಸಮಸ್ಯಾತ್ಮಕ’: ಅಮೆರಿಕ ಎಚ್ಚರಿಕೆ

Update: 2019-03-21 17:03 GMT

ವಾಶಿಂಗ್ಟನ್, ಮಾ. 21: ಭಯೋತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧ ನಿರಂತರ, ಪಾರದರ್ಶಕ ಹಾಗೂ ದೃಢ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕ ಪಾಕಿಸ್ತಾನಕ್ಕೆ ಸೂಚಿಸಿದೆ ಹಾಗೂ ಭಾರತದ ಮೇಲೆ ನಡೆಯುವ ಇನ್ನೊಂದು ಭಯೋತ್ಪಾದಕ ದಾಳಿ ‘ಅತ್ಯಂತ ಸಮಸ್ಯಾತ್ಮಕ’ವಾಗಲಿದೆ ಎಂದು ಅದು ಎಚ್ಚರಿಸಿದೆ.

‘‘ಈ ವಲಯದಲ್ಲಿ ಉದ್ವಿಗ್ನತೆ ಮತ್ತೆ ಹುಟ್ಟಿಕೊಳ್ಳದಂತೆ ಖಾತರಿಪಡಿಸಲು, ಭಯೋತ್ಪಾದಕ ಗುಂಪುಗಳು, ಅದರಲ್ಲೂ ಮುಖ್ಯವಾಗಿ ಜೈಶೆ ಮುಹಮ್ಮದ್ ಮತ್ತು ಲಷ್ಕರೆ ತಯ್ಯಬಗಳ ವಿರುದ್ಧ ಪಾಕಿಸ್ತಾನ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ನೋಡಬೇಕಾಗಿದೆ’’ ಎಂದು ಅಮೆರಿಕದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಶ್ವೇತಭವನದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘‘ಈ ಭಯೋತ್ಪಾದಕ ಗುಂಪುಗಳನ್ನು ನಿಯಂತ್ರಿಸುವ ಪ್ರಾಮಾಣಿಕ ಕ್ರಮಗಳ ಅನುಪಸ್ಥಿತಿಯಲ್ಲಿ, ಭಾರತದ ಮೇಲೆ ಇನ್ನೊಂದು ಭಯೋತ್ಪಾದಕ ದಾಳಿ ನಡೆದರೆ, ಅದು ಪಾಕಿಸ್ತಾನಕ್ಕೆ ಅತ್ಯಂತ ಸಮಸ್ಯಾತ್ಮಕವಾಗಿರುತ್ತದೆ ಹಾಗೂ ಅದು ಉದ್ವಿಗ್ನತೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಎರಡೂ ದೇಶಗಳಿಗೆ ಅಪಾಯಕಾರಿ’’ ಎಂದು ಆ ಅಧಿಕಾರಿ ಹೇಳಿದರು.

ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತೀಯ ಯುದ್ಧವಿಮಾನಗಳು ದಾಳಿ ನಡೆಸಿದ ಬಳಿಕ, ಪಾಕಿಸ್ತಾನ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ‘‘ನಿರಂತರ ಹಾಗೂ ದೃಢ’ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಅಮೆರಿಕ ಮತ್ತು ಅಂತರ್‌ರಾಷ್ಟ್ರೀಯ ಸಮುದಾಯ ನೋಡಬೇಕಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News