ಮುಂದಿನ ವಾರ ಅಮೆರಿಕ ಕಾಂಗ್ರೆಸ್‌ನಲ್ಲಿ ಬೋಯಿಂಗ್ ಅಧಿಕಾರಿಗಳ ವಿಚಾರಣೆ

Update: 2019-03-21 17:08 GMT

ವಾಶಿಂಗ್ಟನ್, ಮಾ. 21: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌ನ ‘737 ಮ್ಯಾಕ್ಸ್’ ಮಾದರಿಯ ವಿಮಾನಗಳು ಪತನಗೊಂಡಿರುವ ಹಿನ್ನೆಲೆಯಲ್ಲಿ, ವಿಮಾನ ನಿರ್ಮಾಣ ಕಂಪೆನಿಯ ಅಧಿಕಾರಿಗಳು ಮತ್ತು ಅಮೆರಿಕ ಸರಕಾರದ ನಿಯಂತ್ರಣ ಸಂಸ್ಥೆಗಳು ಮುಂದಿನ ವಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಸಾರ್ವಜನಿಕ ವಿಚಾರಣೆಯನ್ನು ಎದುರಿಸಲಿದ್ದಾರೆ.

ಟೆಕ್ಸಾಸ್‌ನ ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಝ್, ವಾಯುಯಾನ ಮತ್ತು ಬಾಹ್ಯಾಕಾಶ ಕುರಿತ ವಾಣಿಜ್ಯ ಉಪಸಮಿತಿಯನ್ನು ಮಾರ್ಚ್ 27ರಂದು ವಿಚಾರಣೆ ನಡೆಸಲಿದ್ದಾರೆ. ಅದೇ ವೇಳೆ, ಕೇಂದ್ರ ವಾಯುಯಾನ ಸಂಸ್ಥೆಯ ಮುಖ್ಯಸ್ಥ ಸೇರಿದಂತೆ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳನ್ನೂ ಈ ಸಂದರ್ಭದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು.

737 ಮ್ಯಾಕ್ಸ್ 8ರ ಮಾದರಿಯ ಎರಡು ವಿಮಾನಗಳು ಪತನಗೊಂಡು 300ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಮೊದಲ ಪ್ರಕರಣದಲ್ಲಿ, ಇಂಡೋನೇಶ್ಯದ ಲಯನ್ ಏರ್ ವಾಯುಯಾನ ಸಂಸ್ಥೆಗೆ ಸೇರಿದ ವಿಮಾನವು ಅಕ್ಟೋಬರ್ 29ರಂದು ಜಾವಾ ಸಮುದ್ರದಲ್ಲಿ ಪತನಗೊಂಡಿದ್ದರೆ, ಎರಡನೇ ಪ್ರಕರಣದಲ್ಲಿ, ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಮಾರ್ಚ್ 10ರಂದು ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News