ಕೇರಳದ ಜನರ ಬಗ್ಗೆ ಅವಮಾನಕಾರಿ ಹೇಳಿಕೆ: ಅರ್ನಬ್ ಗೋಸ್ವಾಮಿಗೆ ಕೋರ್ಟ್ ಸಮನ್ಸ್

Update: 2019-03-21 17:23 GMT

ತಿರುವನಂತಪುರಂ, ಮಾ.21: ಸುದ್ದಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಕೇರಳ ರಾಜ್ಯದ ಜನರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕ್ರಿಮಿನಲ್ ಮಾನಹಾನಿ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಮತ್ತು ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಕೇರಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಕಳೆದ ವರ್ಷ ರಿಪಬ್ಲಿಕ್ ಟಿವಿಯಲ್ಲಿ ನಡೆದ, ಕೇರಳ ನೆರೆ ಪರಿಹಾರಕ್ಕೆ ನೆರವು ನೀಡುವ ಯುಎಇಯ ಪ್ರಸ್ತಾವವನ್ನು ಸ್ವೀಕರಿಸಲು ಕೇಂದ್ರ ಸರಕಾರ ನಿರಾಕರಿಸಿತ್ತೇ ಎಂಬ ಸಂವಾದ ಕಾರ್ಯಕ್ರಮದಲ್ಲಿ ಗೋಸ್ವಾಮಿ ಕೇರಳದ ಜನರನ್ನು ನಾಚಿಕೆಯಿಲ್ಲದವರು ಎಂದು ಹೇಳಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)ದ ನಾಯಕ ಪಿ.ಸಸಿ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 20ರ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕಣ್ಣೂರಿನ ಜುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗೋಸ್ವಾಮಿಗೆ ಸೂಚಿಸಿದೆ. “ಈ ಗುಂಪು ನಾಚಿಕೆಹೀನವಾಗಿದೆ. ಇಷ್ಟು ನಾಚಿಕೆಯಿಲ್ಲದ ಭಾರತೀಯರನ್ನು ನಾನೆಂದೂ ಕಂಡಿಲ್ಲ. ಅವರು ಎಲ್ಲ ಕಡೆಯೂ ಸುಳ್ಳನ್ನು ಹರಡುತ್ತಾ ಹೋಗಿದ್ದಾರೆ. ಇದಕ್ಕಾಗಿ ಅವರಿಗೆ ಏನು ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ” ಎಂದು ಗೋಸ್ವಾಮಿ ತನ್ನ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿತ್ತು. ಅರ್ನಬ್ ಗೋಸ್ವಾಮಿ ಕೇರಳದ ಜನರಲ್ಲಿ ಬೇಷರತ್ ಕ್ಷಮೆ ಕೇಳಬೇಕು ಮತ್ತು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 10 ಕೋಟಿ ರೂ. ನೀಡಬೇಕು ಎಂದು ಪಿ.ಸಸಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News