ಮೂಡುಬಿದಿರೆ: ಪಂಚಾಯತ್ ಸದಸ್ಯೆಗೆ ಜೀವಬೆದರಿಕೆ ದೂರು

Update: 2019-03-21 17:47 GMT

ಮೂಡುಬಿದಿರೆ: ದಲಿತ ಸಮುದಾಯಕ್ಕೆ ಸೇರಿದ ಪಂಚಾಯತ್ ಸದಸ್ಯೆಗೆ ಜಾತಿ ನಿಂದನೆಗೈದು ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಪಡುಮಾರ್ನಾಡು ಪಂಚಾಯತಿ ಮಾಜಿ ಅಧ್ಯಕ್ಷ ಸಹಿತ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಬೆಂಬಲಿತ ಪಡುಮಾರ್ನಾಡು ಗ್ರಾಮ ಪಂಚಾಯತ್‍ನಲ್ಲಿ  ಅಧ್ಯಕ್ಷರಾಗಿದ್ದ ಶ್ರೀನಾಥ್ ಸುವರ್ಣ ಅವರ ವಿರುದ್ಧ ಈಚೆಗೆ ನಡೆದ ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದ 15 ಸದಸ್ಯರ ಪೈಕಿ ಸುಂದರಿ ಕೂಡ ಒಬ್ಬರಾಗಿದ್ದರು ಎನ್ನಲಾಗಿದೆ. 

ಈ ಬೆಳವಣಿಗೆಯಿಂದ ಶ್ರೀನಾಥ್ ಪದಚ್ಯುತರಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮಾ 17ರಂದು ರಾತ್ರಿ ಪಂಚಾಯತ್  ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ, ಸದಸ್ಯ ಯಶೋಧರಾ ಆಚಾರ್ಯ, ಖಾಸಗಿ ವಾಹನ ಚಾಲಕ ದಿನೇಶ್ ಶೆಟ್ಟಿ ಸೇರಿ ಪಂಚಾಯತ್  ಸದಸ್ಯೆ ಸುಂದರಿ ಅವರ ಬನ್ನಡ್ಕದಲ್ಲಿರುವ ಮನೆಯ  ಆವರಣ ಪ್ರವೇಶಿಸಿ ಅವರಿಗೆ ಜಾತಿನಿಂದನೆಗೈದು, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮಂಗಳೂರು ಉತ್ತರ ಉಪ ವಿಭಾಗಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಪ್ರಕರಣದ ಮುಂದಿನ  ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News