ಮೂಡುಬಿದಿರೆ: ಆಳ್ವಾಸ್-ರೋಟರಿ ರಕ್ತನಿಧಿ ಕೇಂದ್ರ ಲೋಕಾರ್ಪಣೆ

Update: 2019-03-21 17:51 GMT

ಮೂಡುಬಿದಿರೆ: ರಕ್ತದ ಅವಶ್ಯಕತೆ ಅತ್ಯಂತ ಮಹತ್ವ ಪಡೆದಿರುವ ಇಂದಿನ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕನೇ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಬ್ಲಡ್ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ನೂತನ ಮೂಡುಬಿದಿರೆ ತಾಲೂಕಿನಲ್ಲಿ ಆಳ್ವಾಸ್-ರೋಟರಿ ರಕ್ತನಿಧಿ ಕೇಂದ್ರ ಗುರುವಾರ ಕಾರ್ಯಾರಂಭಗೊಂಡಿತು.

ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ, ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ ಸಹಿತ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಮೇಶ್, (ಸುವರ್ಣ ಮಹೋತ್ಸವ ವರ್ಷದ) ನಿಕಟಪೂರ್ವ ಅಧ್ಯಕ್ಷ  ಶ್ರೀಕಾಂತ್ ಕಾಮತ್, ಉದ್ಯಮಿ ಜಯರಾಮ ಕೋಟ್ಯಾನ್, ಮೀನಾಕ್ಷಿ ಜಯಕರ ಆಳ್ವ  ಸಹಿತ ಪ್ರಮುಖರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ಹಿರಿಯ ವೈದ್ಯ ಡಾ. ಬಿ. ರತ್ನಾಕರ ಶೆಟ್ಟಿ,  ಉದ್ಯಮಿ ಶ್ರೀಪತಿ ಭಟ್ ದೀಪ ಪ್ರಜ್ವಲನಗೈದರು. ಮಂಗಳೂರು, ಪುತ್ತೂರು ಮತ್ತು ಉಡುಪಿಯಲ್ಲಿ  ಕಾರ್ಯಾ ಚರಿಸುತ್ತಿರುವ ರಕ್ತನಿಧಿ ಘಟಕಗಳ ಇದೀಗ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್‍ನಲ್ಲಿ  ಆಳ್ವಾಸ್-ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆಯಾಗಿದೆ. ಬೆಳ್ತಂಗಡಿ-ಕಾರ್ಕಳ-ಬಂಟ್ವಾಳ-ಗುರುಪುರ ಕೈಕಂಬ ಸಹಿತ ಸುಮಾರು 30-35 ಕಿ.ಮೀ. ವ್ಯಾಪ್ತಿಯ ಜನತೆಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಶ್ರೀಕಾಂತ್ ಕಾಮತ್ ಹೇಳಿದರು. 

'ರೋಟರಿ ಕ್ಲಬ್ ಸುವರ್ಣ ಮಹೋತ್ಸವ ವರ್ಷದಲ್ಲಿ  ರೋಟರಿ  ಸಹಕಾರದೊಂದಿಗೆ ರೂ. 27 ಲಕ್ಷದ ಕೊಡುಗೆಯೊಂದಿಗೆ ಆಳ್ವಾಸ್ ಹೆಲ್ತ್ ಸೆಂಟರ್‍ನಲ್ಲಿ ಈ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ರೂಪಿಸಲಾಗಿದೆ. ಇದೀಗ ಸರಕಾರಿ ನಿಯಮಗಳನ್ನು ಪೂರೈಸಿ ಇದೀಗ ಆರಂಭವಾಗಿದೆ. ಈಗಾಗಲೇ ಮೂಡುಬಿದಿರೆ ಕೋ ಓಪರೇಟಿವ್ ಬ್ಯಾಂಕ್ ಒದಗಿಸಿರುವ ಡಯಾಲಿಸಿಸ್ ಘಟಕವೂ ಈ ಬ್ಲಡ್‍ಬ್ಯಾಂಕ್‍ಗೆ ಪೂರಕವಾಗಿದೆ' ಎಂದು ಡಾ. ಎಂ. ಮೋಹನ ಆಳ್ವ ಹೇಳಿದರು.

ಮೂರೂವರೆ ದಶಕಗಳ ಹಿಂದೆ ತೀರಾ ಹಳ್ಳಿಯಾಗಿದ್ದ ಮೂಡುಬಿದಿರೆಯಲ್ಲಿ  ಯಾವುದೇ  ಸಂಪನ್ಮೂಲಗಳಿಲ್ಲದ ವೇಳೆ ತಜ್ಞ ವೈದ್ಯರನ್ನು ನಿಯೋಜಿಸಿ ಆಸ್ಪತ್ರೆಯೊಂದನ್ನು  ಆರಂಭಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಲೆಕ್ಕಾಚಾರಕ್ಕಿಂತ ಮಾನವೀಯತೆಗೆ ಆದ್ಯತೆಯಿತ್ತು. ಇಂದಿಗೂ ಆಳ್ವಾಸ್ ಅದೇ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ ಎಂದರು.

ಸಮ್ಮಾನ: ಸಾವಿರ ಮಂದಿ ರಕ್ತದಾನಿಗಳಿರುವ ಬ್ಲಡ್ ಡೋನರ್ಸ್  ಹೆಲ್ಪ್ ಲೈನ್ ವಾಟ್ಸ್ ಆ್ಯಪ್ ಗ್ರೂಪ್‍ನ ಪ್ರಮುಖರಾದ ಮೊಹಮ್ಮದ್ ಇರ್ಫಾನ್, ಜವನೆರ್ ಬೆದ್ರದ ಅಧ್ಯಕ್ಷ ಅಮರ್ ಕೋಟೆ, ಆಳ್ವಾಸ್‍ನ ಬ್ಲಡ್ ಬ್ಯಾಂಕ್ ತಂಡದ ಕೀರ್ತನ್ ಪೂಂಜ ಅವರನ್ನು  ಸಮ್ಮಾನಿಸಲಾಯಿತು.

ಸಹಕಾರಿ ಕ್ಲಾರಿಯೋ, ದಶಕಗಳಿಂದ  ರಕ್ತದಾನದ ಆಂದೋಲನವನ್ನೇ ನಡೆಸುತ್ತ ಬಂದಿರುವ ಸಿ.ಎಚ್. ಅಬ್ದುಲ್ ಗಫೂರ್, ನವೀನ್ ಟಿ. ಆರ್. ರಾಜೇಂದ್ರ ಪೈ, ಮಕ್ಬೂಲ್ ಹುಸೇನ್, ರಂಜಿನಿ ಶೆಟ್ಟಿ , ಊರವರಲ್ಲದೆ ಆಳ್ವಾಸ್ ವಿದ್ಯಾರ್ಥಿಗಳ ದೊಡ್ಡ ಸಮೂಹವೇ  ರಕ್ತದಾನಕ್ಕಾಗಿ ಸದಾ ಸನ್ನದ್ಧವಾಗಿರುವುದನ್ನು ಉಲ್ಲೇಖಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ  ವಿವೇಕ್ ಆಳ್ವ, ಆಳ್ವಾಸ್ ಆಸ್ಪತ್ರೆಯ ಡಾ. ವಿನಯ್ ಆಳ್ವ, ಡಾ. ಹನಾ ಆಳ್ವ, ಡಾ. ಮುರಳೀಕೃಷ್ಣ,  ಡಾ. ಸದಾನಂದ ನಾಯಕ್, ಡಾ. ವಸಂತ್ ಟಿ., ಡಾ. ಮಹಾವೀರ ಜೈನ್ ಅತಿಥಿಗಳನ್ನು ಗೌರವಿಸಿದರು. ಆಳ್ವಾಸ್ ಹೆಲ್ತ್ ಸೆಂಟರ್ ವೈದ್ಯಕೀಯ ಅಧೀಕ್ಷಕ  ಡಾ. ಹರೀಶ್ ನಾಯಕ್ ಸ್ವಾಗತಿಸಿ, ಡಾ. ರೇವತಿ ಭಟ್ ವಂದಿಸಿದರು. ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ  ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News