ಉಡುಪಿ ಆರ್‌ಟಿಒ ಅಕ್ರಮ ಆಸ್ತಿಗಳಿಕೆ ಪ್ರಕರಣ: ಮುಂದುವರಿದ ಎಸಿಬಿ ತನಿಖೆ

Update: 2019-03-21 18:08 GMT
ಆರ್.ಎಂ.ವರ್ಣೇಕರ್

ಉಡುಪಿ, ಮಾ.21: ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿರುವ ಉಡುಪಿ ಆರ್‌ಟಿಒ ಆರ್.ಎಂ.ವರ್ಣೇಕರ್ ವಿರುದ್ಧದ ತನಿಖೆಯನ್ನು ಎಸಿಬಿ ಗುರುವಾರ ಮುಂದುವರಿಸಿದೆ.

ಇಂದು ಮುಂಜಾನೆ ವರ್ಣೇಕರ್ ಅವರ ಕಾರವಾರ ಮತ್ತು ಮಂಗಳೂರಿನಲ್ಲಿರುವ ಮನೆಗಳಿಗೆ ಹಾಗೂ ಉಡುಪಿಯ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ.

ಮಂಗಳೂರಿನ ಕಾಪಿಕಾಡಿನಲ್ಲಿರುವ ಐಶಾರಾಮಿ ಬಂಗಲೆ, ಕಾರವಾರದಲ್ಲಿರುವ ಮನೆ ಮತ್ತು ಉಡುಪಿ ಆರ್‌ಟಿಒ ಕಚೇರಿಗೆ ಉಡುಪಿ, ಮಂಗಳೂರು, ಕಾರವಾರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಸಿಬಿ ತಂಡಗಳು ದಾಳಿ ನಡೆಸಿವೆ.

ಕಾಪಿಕಾಡಿನಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಯ, ಬ್ಯಾಂಕ್ ಠೇವಣಿಗಳ, ಮನೆ ಮತ್ತು ಫ್ಲಾಟ್‌ಗಳ ದಾಖಲೆ ಪತ್ರಗಳನ್ನು ಎಸಿಬಿ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಅದೇ ರೀತಿ ಆರ್‌ಟಿಒ ಕಚೇರಿ ಮತ್ತು ಕಾರವಾರದ ಮನೆಯಲ್ಲೂ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಆದರೆ ಈ ವರೆಗೆ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಎಸಿಬಿ ಶೋಧ ಕಾರ್ಯ ಗುರುವಾರ ತಡರಾತ್ರಿಯವರೆಗೆ ನಡೆದಿದ್ದು, ಶುಕ್ರವಾರವೂ ಮುಂದುವರಿಯಲಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಲಂಚ ಸ್ವೀಕಾರ ಆರೋಪದಲ್ಲಿ ಮಾ.16ರಂದು ಎಸಿಬಿ ಬಲೆಗೆ ಬಿದ್ದಿದ್ದ ಆರ್.ಎಂ.ವರ್ಣೇಕರ್‌ರ ಮಂಗಳೂರಿನ ಮನೆಗೆ ಅಂದು ರಾತ್ರಿ ದಾಳಿ ನಡೆಸಿದ ಎಸಿಬಿ ತಂಡ 70 ಲಕ್ಷ ರೂ. ಅಕ್ರಮ ನಗದು ವಶಪಡಿಸಿಕೊಂಡಿತ್ತು. ಇದರ ಮುಂದುವರಿದ ತನಿಖೆಯಂತೆ ಇಂದು ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News