ಆಹಾರ ನೀಡದೆ ದತ್ತು ಮಕ್ಕಳಿಗೆ ಕ್ರೂರ ಹಿಂಸೆ: ಮಹಿಳೆಯ ಬಂಧನ

Update: 2019-03-22 09:39 GMT
ಹಿಂಸೆಗೊಳಗಾದ ಮಕ್ಕಳು, ಒಳಚಿತ್ರದಲ್ಲಿ ಮಷಾಲಾ ಹಕ್‌ನೀ

ವಾಷಿಂಗ್ಟನ್, ಮಾ. 22: ಹಣ ಮಾಡುವ ಉದ್ದೇಶದಿಂದ ದತ್ತು ತೆಗೆದುಕೊಂಡ ಮಕ್ಕಳನ್ನು ಕ್ರೂರವಾಗಿ ಹಿಂಸಿಸಿ ಅದನ್ನು ಯೂಟ್ಯೂಬ್ ವೀಡಿಯೊ ಚಿತ್ರೀಕರಿಸಿದ ಘಟನೆಗೆ ಸಂಬಂಧಿಸಿ ಮಹಿಳೆಯೋರ್ವಳನ್ನು ಬಂಧಿಸಲಾಗಿದೆ.

ಮಷಾಲ ಹಕ್‌ನೀ ಬಂಧಿತ ಮಹಿಳೆಯಾಗಿದ್ದು, ಈಕೆಯ ಮೇಲೆ ಮಕ್ಕಳ ಗೃಹ ಬಂಧನ, ಬಾಲ ಪೀಡನೆ, ಹಿಂಸೆ ಮತ್ತಿತರ ಕೇಸುಗಳನ್ನು ಹೊರಿಸಲಾಗಿದೆ.

ಈಕೆಯ ‘ಫಂಟಾಸ್ಟಿಕ್ ಅಡ್ವಂಚರ್ಸ್’ ಎಂಬ ಯೂಟ್ಯೂಬ್ ಚಾನಲ್‌ಗೆ ಸುಮಾರು 250 ದಶಲಕ್ಷ ವೀಕ್ಷಕರು ಹಾಗೂ 8 ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಆರರಿಂದ 15ರ ಪ್ರಾಯದ ಮಕ್ಕಳಿಂದ ವಿವಿಧ ಸಾಹಸಿಕ ಕೃತ್ಯಗಳನ್ನು ಮಾಡಿಸುವುದು ಚಾನಲ್‌ನ ಪ್ರಮುಖ ಕಾರ್ಯಕ್ರಮವಾಗಿದೆ.ಈ ವೀಡಿಯೊಗಳಲ್ಲಿ ಹೆಚ್ಚಿನವು ವಿಚಿತ್ರವಾದ ರೀತಿಯಲ್ಲಿ ಕೋವಿಗಳನ್ನು ಪರಸ್ಪರ ಗುರಿ ಹಿಡಿಯುವಂತಹ ದೃಶ್ಯಗಳನ್ನು ಒಳಗೊಂಡಿವೆ.

ವೀಡಿಯೊ ಕೊನೆಗೊಳ್ಳುವ ವೇಳೆ ಮಕ್ಕಳು ಕ್ಯಾಮರಾ ನೋಡಿ ಚಾನಲ್ ಲೈಕ್ ಹಾಗೂ ಸಬ್‌ಸ್ಕ್ರೈಬ್ ಮಾಡುವಂತೆ ಹೇಳುತ್ತಾರೆ. ಆದರೆ ಆ ಮಕ್ಕಳು ವಾಸವಿರುವ ಮನೆಯಲ್ಲಿ ಅವರ ಪರಿಸ್ಥಿತಿ ಅತ್ಯಂತ ಪರಿತಾಪಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲವೊಮ್ಮೆ ಈ ಮಕ್ಕಳಿಗೆ ಆಹಾರವನ್ನೇ ಕೊಡುವುದಿಲ್ಲ, ಬಚ್ಚಲುಮನೆಯಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕುವುದು, ಕ್ರೂರವಾಗಿ ಥಳಿಸುವುದು ಮಾಡಲಾಗುತ್ತಿತ್ತು ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಜೊತೆಗೆ ಮುಖ ಹಾಗೂ ಶರೀರಕ್ಕೆ ಕರಿಮೆಣಸಿನ ಸ್ಪ್ರೇ ಸಿಂಪಡಿಸಲಾಗುತ್ತಿತ್ತು ಎಂದು ಮಕ್ಕಳು ದೂರಿದ್ದಾರೆ.ಬೆಲ್ಟ್ ಮತ್ತು ಬ್ರಷ್‌ನಿಂದ ಹೊಡೆಯುವುದು, ತಲೆಯಿಂದ ಪಾದದವರೆಗೆ ಕರಿಮೆಣಸಿನ ಸ್ಪ್ರೇ ಹೊಡಿಯುವುದು ಹಕ್‌ನೀಯ ಕ್ರೂರ ವಿನೋದಗಳಾಗಿದ್ದವು ಎಂದು ಮಕ್ಕಳು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಕ್‌ನೀ ಹೇಳಿದ್ದನ್ನು ಕೇಳದಿದ್ದರೆ ಗುಪ್ತಾಂಗಗಳಿಗೆ ಕರಿಮೆಣಸಿನ ಸ್ಪ್ರೇ ಸಿಂಪಡಿಸುತ್ತಿದ್ದಳು. ಇದರಿಂದ ನಾಲ್ಕೈದು ದಿನಗಳ ಕಾಲ ಯಾತನೆ ಅನುಭವಿಸುತ್ತಿದ್ದೆವು ಎಂದು ಹುಡುಗಿಯೊಬ್ಬಳು ದೂರಿದ್ದಾಳೆ. ಹಕ್‌ನೀ ಕೆಲವೊಮ್ಮೆ ಹುಡುಗರ ಜನನಾಂಗದ ತುದಿಯನ್ನು ಚಿವುಟಿ ಹಾಕುತ್ತಿದ್ದಳು. ಇದರಿಂದ ರಕ್ತಸ್ರಾವವುಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳನ್ನು ಅತಿಯಾದ ತಂಪು ನೀರಿನಲ್ಲಿ ಬಲವಂತವಾಗಿ ಸ್ನಾನಮಾಡಿಸಲಾಗುತ್ತಿತ್ತು. ಹೀಗೆಲ್ಲ ಮಕ್ಕಳನ್ನು ಹಿಂಸಿಸಿ, ಉಪವಾಸವಿಟ್ಟು ಹಕ್‌ನೀ ಇದುವರೆಗೆ 2.5 ದಶಲಕ್ಷ ಡಾಲರ್ ಸಂಪಾದಿಸಿದ್ದಾಳೆ. ತನ್ನ ನಿಬಂಧನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆಕೆಯ ಚಾನಲನ್ನು ಯೂಟ್ಯೂಬ್ ತೆಗೆದು ಹಾಕಿದೆ. ಮಾ. 13ರಂದು ಹಕ್‌ನೀಯ ಸ್ವಂತ ಮಗಳು ನೀಡಿದ ವಿವರಗಳನ್ವಯ ಪೊಲೀಸರು ನಡೆಸಿದ ತನಿಖೆಯಲ್ಲಿ ಹಕ್‌ನೀಯ ಕ್ರೌರ್ಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಹಕ್‌ನೀಯ ಮನೆಗೆ ಭೇಟಿ ನೀಡಿದ ಆರೋಗ್ಯ ತಪಾಸಣೆಯ ತಂಡಕ್ಕೆ, ದತ್ತು ತೆಗೆದುಕೊಂಡ ಮಗುವೊಂದನ್ನು ಬಚ್ಚಲು ಮನೆಯಲ್ಲಿ ಕೂಡಿಹಾಕಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಆ ಮಗು ಕೇವಲ ಡಯಪರ್ ಧರಿಸಿತ್ತು. ಇತರ ಏಳು ಮಕ್ಕಳನ್ನು ತಪಾಸಣೆಗೊಳಪಡಿಸಿದಾಗ ಅವರ ಅಗತ್ಯಕ್ಕೆ ತಕ್ಕಷ್ಟು ಆಹಾರ ನೀಡದಿರುವುದು ಗೊತ್ತಾಯಿತು. ಬಾಯಾರಿಕೆಯಾಗುತ್ತಿದೆ ಮತ್ತು ಹಸಿವಾಗುತ್ತಿದೆ ಎಂದು ಆ ಮಕ್ಕಳು ತಂಡದೊಂದಿಗೆ ಹೇಳಿದರು.

ಆದರೆ ಮಕ್ಕಳಿಗೆ ಆಹಾರ ನೀಡಿದರೂ ಅವರು ಅದನ್ನು ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಕಾರಣ ಕೇಳಿದಾಗ ಹಕ್‌ನೀ ಥಳಿಸುತ್ತಾಳೆ ಎಂಬ ಉತ್ತರ ಬಂತು.

ಹಲವು ದಿನಗಳ ಕಾಲ ನಮ್ಮನ್ನು ಸ್ನಾನದ ಮನೆಯಲ್ಲಿ ಕೂಡಿಹಾಕಲಾಗುತ್ತದೆ. ಆಹಾರ, ನೀರು ಕೊಡುವುದಿಲ್ಲ. ಬರೀ ನೆಲದಲ್ಲಿ ಮಲಗಿಸಲಾಗುತ್ತದೆ ಎಂದು ಮಕ್ಕಳು ದೂರಿದರು.

ಪ್ರಕರಣಕ್ಕೆ ಸಂಬಂಧಿಸಿ ಹಕ್‌ನೀಯ ಇಬ್ಬರು ಸ್ವಂತ ಮಕ್ಕಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಮನೆಯಲ್ಲಿ ಬಾಲ ಪೀಡನೆ ನಡೆಯುತ್ತಿದ್ದರೂ ಪೊಲೀಸರಿಗೆ ವರದಿ ಮಾಡಲಿಲ್ಲ ಎಂಬುದೇ ಇವರ ಮೇಲಿರುವ ಆರೋಪ. ಆದರೆ ಆರೋಪಗಳನ್ನು ಹಕ್‌ನೀ ತಳ್ಳಿಹಾಕಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News