ವಿಶೇಷ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ ನಲ್ಲಿ 368 ಪದಕಗಳನ್ನು ಗೆದ್ದ ಭಾರತ

Update: 2019-03-22 10:34 GMT

ಅಬುಧಾಬಿ, ಮಾ.22: ಇಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್‍ ವರ್ಲ್ಡ್ ಗೇಮ್ಸ್ ನ ಪವರ್ ಲಿಫ್ಟಿಂಗ್ ಹಾಗೂ ರೋಲರ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಭಾರತ ಉತ್ತಮ ಸಾಧನೆ ತೋರುವ ಮೂಲಕ ಕೂಟದಲ್ಲಿ ಒಟ್ಟು 368 ಪದಕಗಳನ್ನು ಬಾಚಿಕೊಂಡು ಗಣನೀಯ ಸಾಧನೆ ಮಾಡಿದೆ. ಭಾರತ ತಂಡ ಒಟ್ಟು 85 ಚಿನ್ನ, 154 ಬೆಳ್ಳಿ ಹಾಗೂ 129 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಆದರೆ ವಿಶೇಷ ಒಲಿಂಪಿಕ್ಸ್ ಇಂಟರ್‍ನ್ಯಾಷನಲ್ ಅಧ್ಯಕ್ಷ ತಿಮ್ಮೋತಿ ಶ್ರೀವೆರ್ ಅವರು, ‘ಈ ಕ್ರೀಡಾಕೂಟ ಪದಕಗಳ ಬಗ್ಗೆ ಅಲ್ಲವೇ ಅಲ್ಲ’ ಎಂದು ಹೇಳುತ್ತಾರೆ.

"ಇದು ದೇಶಗಳ ಬಗ್ಗೆ ಅಲ್ಲ, ಜನರ ಬಗೆಗಿನ ಕ್ರೀಡೆ. ಒಂದು ದೇಶ ಮತ್ತೊಂದನ್ನು ಸೋಲಿಸುವುದು ಅಲ್ಲ. ಕೇವಲ ಅಥ್ಲೀಟ್‍ ಗಳ ಬಗ್ಗೆ ಮತ್ತು ಅವರ ಸಂದೇಶಗಳ ಬಗ್ಗೆ ಅಂದರೆ ‘ನನಗೆ ಒಳ್ಳೆಯ ಅನುಭವ ಆಯಿತು, ನಾನು ಆಡಿದೆ, ತರಬೇತಿ ಪಡೆದೆ, ಸ್ಪರ್ಧಿಸಿದೆ, ಪದಕ ಗೆದ್ದೆ’ ಎಂಬ ಬಗ್ಗೆ ಮಾತ್ರ ಮಾತನಾಡಬೇಕು ಎಂದು ‘ಪದಕಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನಿ’ ಎಂದು ಕೇಳಿದ ಪ್ರಶ್ನೆಗೆ ತಿಮ್ಮೋತಿ ಉತ್ತರಿಸಿದರು.

"ಆದ್ದರಿಂದ ನಾವು ಪದಕಗಳ ಪಟ್ಟಿಯನ್ನು ಸಿದ್ಧಪಡಿಸಿಲ್ಲ" ಎಂದು ವಿವರಿಸಿದರು.

ಕೂಟ ಆಯೋಜಿಸಿದ ಯುಎಇ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಅವರು, "ಎಮಿರೇಟ್ಸ್ ಮತ್ತೆ ಬಯಸಿದರೆ ಇಲ್ಲಿಗೆ ಈ ಕ್ರೀಡೆಯನ್ನು ಮತ್ತೆ ನೀಡಲಾಗುವುದು. ಯುಎಇಯಲ್ಲಿ ನಡೆದ ಕೂಟದಲ್ಲಿ ದಾಖಲೆ ಸಂಖ್ಯೆಯ ಕ್ರೀಡೆಗಳು ಇದ್ದವು ಹಾಗೂ ದಾಖಲೆ ಸಂಖ್ಯೆಯ ದೇಶಗಳು ಭಾಗವಹಿಸಿದ್ದವು" ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News