ನಿಮ್ಮ ನಡೆ ವಿಶ್ವನಾಯಕರಿಗೆ ಪಾಠವಾಗಲಿ: ನ್ಯೂಝಿಲೆಂಡ್ ಪ್ರಧಾನಿಗೆ ಮಸೀದಿಯ ಇಮಾಮ್ ಶ್ಲಾಘನೆ

Update: 2019-03-22 12:40 GMT

ಕ್ರೈಸ್ಟ್‍ಚರ್ಚ್, ಮಾ.22: ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದು 50 ಮಂದಿ ಮೃತಪಟ್ಟ ವಾರದ ಬಳಿಕ ಮುಸ್ಲಿಂ ಪ್ರಾರ್ಥನೆಗೆ ಶುಕ್ರವಾರ ಮತ್ತೆ ಕರೆ ನೀಡಲಾಗಿದ್ದು, ಮೃತಪಟ್ಟ ನಾಗರಿಕರ ಸ್ಮರಣಾರ್ಥ ಸಾವಿರಾರು ಮಂದಿ ನೆರೆದಿದ್ದರು.

ಬಹುತೇಕ ಮಂದಿ ಅಲ್ ನೂರ್ ಮಸೀದಿ ಮುಂದಿನ ಹಗ್ಲೆ ಪಾರ್ಕ್‍ನಲ್ಲಿ ಪ್ರಧಾನಿ ಜೆಸಿಂಡಾ ಆರ್ಡೆನ್ ನೇತೃತ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. "ನ್ಯೂಝಿಲೆಂಡ್ ನಿಮ್ಮ ಜತೆ ಶೋಕಿಸುತ್ತಿದೆ. ನಾವೆಲ್ಲರೂ ಒಂದು" ಎಂದು ಸಂಕ್ಷಿಪ್ತ ಭಾಷಣದಲ್ಲಿ ಅವರು ಹೇಳಿದರು. ಬಳಿಕ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ದುರ್ಘಟನೆಯಲ್ಲಿ ಮೃತಪಟ್ಟ ಬಹುತೇಕ ಮಂದಿ ಪಾಕಿಸ್ತಾನ, ಭಾರತ, ಮಲೇಷ್ಯಾ, ಇಂಡೋನೇಷ್ಯಾ, ಟರ್ಕಿ, ಸೊಮಾಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಆಗಮಿಸಿದ್ದ ವಲಸೆ ಕಾರ್ಮಿಕರು.

"ನಮಗೆ ಹೃದಯ ವಿದ್ರಾವಕ ನೋವು ಆಗಿರಬಹುದು; ಆದರೆ ನಾವು ವಿಭಜನೆಯಾಗಿಲ್ಲ. ನಾವು ಜೀವಂತವಿದ್ದೇವೆ; ಒಂದಾಗಿದ್ದೇವೆ. ಯಾರು ಕೂಡಾ ನಮ್ಮನ್ನು ವಿಭಜಿಸಲಾಗದು" ಎಂದು ಇಮಾಮ್ ಗಮಲ್ ಫೌದಾ ಬಣ್ಣಿಸಿದರು. ಮುಸ್ಲಿಂ ಸಮುದಾಯದ ಶೋಕದಲ್ಲಿ ಭಾಗಿಯಾಗುವ ಸಲುವಾಗಿ ಬಹಳಷ್ಟು ಮಂದಿ ಶಿರವಸ್ತ್ರಗಳನ್ನು ಧರಿಸಿದ್ದರು.

"ಸಂತ್ರಸ್ತರ ಕುಟುಂಬಗಳಿಗಾಗಿ, ನಿಮ್ಮ ಪ್ರೀತಿಪಾತ್ರರು ನಿರರ್ಥಕವಾಗಿ ಮೃತಪಟ್ಟಿಲ್ಲ. ಅವರ ರಕ್ತವು ನಿರೀಕ್ಷೆಯ ಚಿಲುಮೆಗೆ ವೇಗ ನೀಡಿದೆ" ಎಂದು ಅವರು ಪ್ರಾರ್ಥನೆಯಲ್ಲಿ ಹೇಳಿದ್ದನ್ನು ದೇಶವ್ಯಾಪಿ ಪ್ರಸಾರ ಮಾಡಲಾಯಿತು. ದೇಶದ ಪ್ರಧಾನಿಯವರು ಘಟನೆಗೆ ಸ್ಪಂದಿಸಿದ್ದನ್ನು ಉಲ್ಲೇಖಿಸಿದ ಇಮಾಮ್, "ಇದು ವಿಶ್ವನಾಯಕರಿಗೆ ಪಾಠ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News