ಎಸ್‌ಐಓದಿಂದ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019 ಬಿಡುಗಡೆ

Update: 2019-03-22 11:29 GMT

ಮಂಗಳೂರು, ಮಾ.22: ಲೋಕಸಭಾ ಚುನಾವಣೆಯಲ್ಲಿ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಈ ದೇಶದ ಭವಿಷ್ಯದ ತೀರ್ಮಾನ ಮಾಡದೆ ವಿದ್ಯಾರ್ಥಿ ಯುವಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಆ ಮೂಲಕ ರಾಜಕೀಯ ಪಕ್ಷಗಳು ಈ ಸಮಸ್ಯೆಗಳ ಕುರಿತು ಸಮಗ್ರ ಪರಿಹಾರ ನೀಡುವಲ್ಲಿ ಕಾರ್ಯ ಪ್ರವೃತರಾಗಬೇಕಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ ಆಗ್ರಹಿಸಿದ್ದಾರೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ವತಿಯಿಂದ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಸಲುವಾಗಿ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಎಸ್.ಐ.ಓ ಕಳೆದ ಹಲವಾರು ವರ್ಷಗಳಿಂದ ಒಂದು ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಪ್ರತೀ ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆಯನ್ನು ತರುತ್ತಿದೆ. ಈ ಬಾರಿಯೂ ಪ್ರತೀ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ, ನಮ್ಮ ಅಹವಾಲನ್ನು ತಿಳಿಸಿದ್ದೇವೆ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುದೃಢಗೊಳಿಸುವ ದಿಸೆಯಲ್ಲಿ ಹಾಗೂ ವಿದ್ಯಾರ್ಥಿ ಯುವಕರನ್ನು ದೇಶದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ದೇಶದ, ರಾಜ್ಯದ ಮತ್ತು ಜಿಲ್ಲೆಯ ಹಲವಾರು ನೈಜ ವಿಚಾರಗಳಾದ ಶಿಕ್ಷಣ, ಉದ್ಯೋಗ, ಪರಿಸರ, ಮಾನವ ಹಕ್ಕು ಹಾಗೂ ಸಾಮಾಜಿಕ ನ್ಯಾಯವನ್ನೊಳಗೊಂಡು ಸುಮಾರು 50ರಷ್ಟು ಬೇಡಿಕೆ ಹಾಗೂ ಶಿಫಾರಸ್ಸುಗಳನ್ನು ಚುನಾವಣಾ ಎಸ್‌ಐಓನ ವಿದ್ಯಾರ್ಥಿ ಪ್ರಣಾಳಿಕೆಯು ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಣದ ವಿಭಾಗವಾಗಿ ಹಲವು ಶಿಕ್ಷಣ ಆಯೋಗಗಳ ಶಿಫಾರಸ್ಸಿನಂತೆ ಶಿಕ್ಷಣದ ಮೇಲಿನ ವೆಚ್ಚ ಪ್ರಮಾಣವನ್ನು ಜಿಡಿಪಿ ಯ ಶೇ.8ಕ್ಕೆ ಏರಿಸಬೇಕೆಂಬುದು ನಮ್ಮ ಪ್ರಾಥಮಿಕ ಬೇಡಿಕೆಯಾಗಿದೆ. ಆರ್‌ಟಿಇ ಕಾಯ್ದೆಯನ್ನು ಹುಟ್ಟಿನಿಂದ 18 ವಯಸ್ಸಿನವರೆಗೆ ವಿಸ್ತರಿಸಬೇಕು. ಎಲ್ಲ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಬೇಕು. ದ.ಕ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಸಮೀಕ್ಷೆ ನಡೆಸಬೇಕು. ಕಡಿಮೆ ಪದವೀಧರರ ಸಂಖ್ಯೆ, ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವವರ ಸಂಖ್ಯೆ ಮತ್ತು ಅದೇ ರೀತಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ, ಅದರ ಆಧಾರದಲ್ಲಿ ಅಗತ್ಯವುಳ್ಳ ಕಾರ್ಯ ನೀತಿಯನ್ನು ರೂಪಿಸಿ, ಬಳಿಕ ಸರ್ಕಾರವು ನಿಧಿಯನ್ನು ನೀಡಬೇಕು. 

ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಕಾನೂನು ಕಾಲೇಜು(ಲಾ ಕಾಲೇಜು) ಸ್ಥಾಪಿಸಬೇಕು ಸೇರಿದಂತೆ ಹಲವಾರ ಶಿಫಾರಸುಗಳು ಚುನಾವಣಾ ಪ್ರಣಾಳಿಕೆ ಹೊಂದಿದೆ ಎಂದು ಅವರು ಹೇಳಿದರು.

ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ರಿಝ್ವನ್ ಅಝ್ಹರಿ, ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ಸಂತೋಷ್, ಎಸ್‌ಐ ಓ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಸತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News