ಮಂಗಳೂರು ವಿವಿಯಲ್ಲಿ ವಿಶ್ವ ಜಲ ದಿನಾಚರಣೆ

Update: 2019-03-22 12:18 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಭೂವಿಜ್ಞಾನ ವಿಭಾಗದ ಆಶ್ರಯದಲ್ಲಿ ವಿಶ್ವಜಲ ದಿನಾಚರಣೆ ಕಾರ್ಯಕ್ರಮವು  ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಪಡ್ರೆ ಅವರು ವಿಶ್ವ ಜಲ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು.  ಪರಿಸರ ಸಂರಕ್ಷಣೆ ಮತ್ತು ಜಲಸಂರಕ್ಷಣೆಯ ವಿಷಯದಲ್ಲಿ ನಾವು ಸರಕಾರದ ಯಾವುದೇ ಅನುದಾನ ಅಥವಾ ಸಬ್ಸಿಡಿಗಳಿಗೆ ಕಾಯದೆ ಸಂಘಟನಾತ್ಮಕಾಗಿ, ಸ್ವಯಂ ಪ್ರಯತ್ನ ದೊಂದಿಗೆ ಕಾರ್ಯರೂಪಕ್ಕಿಳಿಯಬೇಕು ಎಂದು  ಅಭಿಪ್ರಾಯಪಟ್ಟರು. 

ಕರ್ನಾಟಕದ ನಮ್ಮಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಇದ್ದರೂ ಜನವರಿ ತಿಂಗಳಲ್ಲಿ ನೀರಿಗೆ ಬರ ಎದುರಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ನೆರೆಯ ಸಮಸ್ಯೆಯೂ ಸೃಷ್ಟಿಯಾಗುತ್ತಿದೆ. ಇಂತಹ ಸಮಸ್ಯೆಗೆ ಮಾನವನೇ ನೇರ ಕಾರಣಕರ್ತನಾಗಿದ್ದಾನೆ. ಹಿಂದಿನ ಕಾಲದಲ್ಲಿದ್ದ ನೀರು ಇಂಗುವ ಮದಕ, ಕೆರೆಯಂತಹ ಜಾಗಗಳಲ್ಲಿ ಕಮರ್ಶಿಯಲ್ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಅರಣ್ಯಗಳೂ ನಾಶವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಯ ಸ್ಥಿತಿ ಊಹಿಸಲು ಅಸಾಧ್ಯ. ಆದ್ದರಿಂದ ನಾವು ಈಗಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯೊಂದಿಗೆ ನೀರಿನ ಸಂರಕ್ಷಣೆ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಮುಖ್ಯವಾಗಿ ಯುವ ಸಮುದಾಯ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ.ಕೆ.ಎಂ.ಬಾಲಕೃಷ್ಣ ಅವರು, ಜಲಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿ, ಯುವ ಸಮುದಾಯವು ಪರಿಶ್ರಮದೊಂದಿಗೆ ಮುನ್ನಡೆಯಬೇಕಾದ ಅಗತ್ಯತೆ ಇದೆ. ಹಲವಾರು ಎಕರೆ ಭೂ ಪ್ರದೇಶವನ್ನು ಹೊಂದಿರುವ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿಯೂ ಇಂತಹ ಮಳೆ ನೀರು ಸಂಗ್ರಹದಂತಹ ಕಾರ್ಯಯೋಜನೆಯನ್ನು ಸಮರ್ಪಕವಾಗಿ ರೂಪಿಸಬೇಕಾದ ಅಗತ್ಯತೆ ಇದೆ ಎಂದರು. 

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಜೀವವಿಜ್ಞಾನ ವಿಭಾಗದ ಪ್ರೊ.ದಶರಥ ಅಂಗಡಿ ಅವರು ಸ್ವಾಗತಿಸಿ, ಸುಹೈಲಾ ಅವರು ವಂದಿಸಿದರು. 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News