ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ: ಸ್ವರ್ಣಕವಚಾವೃತ ಧ್ವಜಸ್ತಂಭ ಪ್ರತಿಷ್ಠೆ, ಹೂತೇರು ಸಮರ್ಪಣೆ

Update: 2019-03-22 12:42 GMT

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ  ರೂ. 1.50ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸ್ವರ್ಣ ಕವಚ ಧ್ವಜಸ್ತಂಭದ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಹೂತೇರು ಸಮರ್ಪಣೆ ಶುಕ್ರವಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. 

ಬೆಳಗ್ಗೆ 9.42ರ ಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ ನಡೆಸಲಾಯಿತು ಹಾಗೂ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿಸಲಾಯಿತು. ನೂತನ ಧ್ವಜಸ್ತಂಭಕ್ಕೆ ನಂದಿ ಸ್ಥಾಪನೆಯ ಬಳಿಕ ಕಲಶಾಭಿಷೇಕ ನಡೆಯಿತು. 

ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯ ಪ್ರಾಕಾರದಲ್ಲಿರುವ ಶ್ರೀ ಬಾಲಗಣಪತಿ ದೇವರಿಗೆ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಹೂತೇರು ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಪ್ರಾತಃಕಾಲ 5.30ಕ್ಕೆ 108 ತೆಂಗಿನ ಕಾಯಿ ಗಣಪತಿ ಹೋಮ ಸಲ್ಲಿಸಲಾಯಿತು. 

ಸ್ವರ್ಣ ಕವಚ ಧ್ವಜಸ್ತಂಭದ ತುದಿಯಲ್ಲಿ ನಂದಿಯನ್ನು ಧ್ವಜಪ್ರತಿಷ್ಠೆಯ ಸಂದರ್ಭ ಸ್ಥಾಪಿಸಲಾಯಿತು. ತಾತ್ಕಾಲಿಕ ಲಿಫ್ಟ್ ಸಹಾಯದಿಂದ ದೇವಾಲಯದ ತಂತ್ರಿಗಳು ಮತ್ತು ಅವರ ಪರಿಕರ್ಮಿಗಳು ಧ್ವಜಸ್ತಂಭದ ಮೇಲೆ ತೆರಳಿ 5 ಅಂಗುಲ ಎತ್ತರದ ಸ್ವರ್ಣ ಕವಚದ ನಂದಿಯನ್ನು ಪ್ರತಿಷ್ಠಾಪಿಸಿದರು. ಬಳಿಕ ನಂದಿ ಪೂಜೆ ನಡೆಸಿ ಧ್ವಜಸ್ತಂಭಕ್ಕೆ ಅಭಿಷೇಕ ನೆರವೇರಿಸಲಾಯಿತು. 

ನೂತನ ಸ್ವರ್ಣ ಕವಚ ಧ್ವಜಸ್ತಂಭ ಪ್ರತಿಷ್ಠೆಯ ಬಳಿಕ ರೂ. 22ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ದೇವರ ಹೂತೇರಿನ ಸಮರ್ಪಣೆ ಕಾರ್ಯವನ್ನು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿಸಿದರು. ಬಳಿಕ ಪ್ರತಿಷ್ಠಾ ಬಲಿ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. 

ಈ ಸಂದರ್ಭದಲ್ಲಿ  ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸಮಿತಿ ಸದಸ್ಯರಾದ ಯು.ಪಿ. ರಾಮಕೃಷ್ಣ, ಕೆ. ಸಂಜೀವ ನಾಯಕ್, ಎನ್. ಕರುಣಾಕರ ರೈ, ಎ. ಜಾನು ನಾಯ್ಕ, ರೋಹಿಣಿ ಆಚಾರ್ಯ, ನಯನಾ ರೈ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ರಾಜಾರಾಮ ಶೆಟ್ಟಿ, ರಮೇಶ್ ಬಾಬು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಚಿದಾನಂದ ಬೈಲಾಡಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸಿವಿಲ್ ಇಂಜಿನಿಯರ್ ರಾಮಚಂದ್ರ ಘಾಟೆ, ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಸಹಿತ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News